ದಾವಣಗೆರೆ ವಿವಿಯಲ್ಲಿ ಎಬಿವಿಪಿ ಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ
ದಾವಣಗೆರೆ, ಜ.12- ಸ್ವಾಭಿಮಾನ, ಸ್ವದೇಶಿ ಜಾಗೃತಿ ಮತ್ತು ಸ್ವಾವಲಂಬನೆಯ ಬದುಕನ್ನು ರೂಢಿಸಿಕೊಂಡರೆ ಬೌದ್ಧಿಕವಾಗಿ ಸದೃಢವಾಗಿರುವ ಭಾರತೀಯರು ತಮ್ಮ ಸಾಮರ್ಥ್ಯವನ್ನು ಅರಿತು ಮುನ್ನಡೆದರೆ ಭಾರತವನ್ನು ವಿಶ್ವದ ಮಹಾನ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯ ಎಂದು ಆದರ್ಶ ಗೋಖಲೆ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಶ್ವವಿದ್ಯಾನಿಲಯದಲ್ಲಿ ಇಂದು ಏರ್ಪಾಡಾಗಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯುತ್ಸವದ ಪ್ರಯುಕ್ತ ಏರ್ಪಡಿಸಿದ್ದ ಯುವ ಧ್ವನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾರತಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳನ್ನು ತಡೆಯುವ, ಅವರ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ. ದೇಶದ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನೇ ಬಳಸಿ, ಸ್ವಾಭಿಮಾನದಿಂದ ಸ್ವಾವಲಂಬನೆಯ ಬದುಕು ಬಾಳಿದರೆ ಸ್ವಾಮಿ ವಿವೇಕಾನಂದರು ಕಂಡ ಕನಸಿನ ಭಾರತವನ್ನು ನಿರ್ಮಿಸಬಹುದು ಎಂದು ತಿಳಿಸಿದರು.
ದೇಶದಲ್ಲಿರುವ ಪ್ರಸ್ತುತ ಶಿಕ್ಷಣವು ಮಕ್ಕಳಿಗೆ ಪ್ರಮಾಣ ಪತ್ರ ನೀಡುವ ಕಲಿಕೆಯಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳಿಗೆ ಅನುಭವ ಆಧಾರಿತ ಬದುಕನ್ನು ಕಟ್ಟಿಕೊಡುವ, ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯಗಳನ್ನು ಕಲಿಸಿ, ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಜ್ಞಾವಂತ, ಸಮಾಜಮುಖಿ ವ್ಯಕ್ತಿಗಳನ್ನು ನಿರ್ಮಿಸಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಸಮಾಜದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ದೇಶದ ಭವ್ಯ ಪರಂಪರೆ, ವೈಜ್ಞಾನಿಕ ಸತ್ಯಗಳು, ಜೀವನ ಶೈಲಿ, ಕೌಟುಂಬಿಕ ಭಾವನಾತ್ಮಕ ಸಂಬಂಧ, ಜೀವನ ಪದ್ಧತಿ, ಮನೆ ಮದ್ದುಗಳ ಬಗ್ಗೆ ಅರಿವು ಮೂಡಿಸಲು ಭಾರತೀಯರಿಗೆ ಸಾಧ್ಯವಾಗದ ಕೆಲಸವನ್ನು ಕೊರೊನಾದಂತ ವೈರಾಣು ಮಾಡಿ ತೋರಿ ಸಿತು. ಕೋವಿಡ್-19ರ ನಂತರ ಇಡೀ ಜಗತ್ತು ಭಾರತದ ಜೀವನ ಪದ್ಧತಿ, ಆಹಾರ- ವಿಹಾರದ ಮೌಲ್ಯಗಳನ್ನು ಅರಿತು ಅಳವಡಿ ಸಿಕೊಳ್ಳುವಂತಾಯಿತು. ಈಗಲಾದರೂ ಭಾರತೀಯರು ವಿದೇಶಿ ವ್ಯಾಮೋಹ ಬಿಟ್ಟು, ಭಾರತೀಯತೆಯನ್ನು ಜೀವನದಲ್ಲಿ ಅಳವಡಿ ಸಿಕೊಂಡರೆ ಸಶಕ್ತ ಭಾರತಕ್ಕೆ ಮತ್ತೊಂದು ಅಡಿಪಾಯ ಹಾಕಿದಂತಾಗುತ್ತದೆ.
-ಆದರ್ಶ ಗೋಖಲೆ
ಸ್ವಾಮಿ ವಿವೇಕಾನಂದರ ಸಲಹೆಯಂತೆ ಪ್ರತಿಯೊಬ್ಬ ವ್ಯಕ್ತಿಯ ಗುರಿ ಮತ್ತು ಯೋಚನೆ ಒಂದಾಗಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಆದರೆ ಭಾರತೀಯರಲ್ಲಿ ಯೋಚನೆ ಮತ್ತು ಗುರಿ ಭಿನ್ನವಾಗಿದ್ದರಿಂದ ಶತಮಾನಗಳ ಪರಕೀಯರು ದೇಶವನ್ನು ಆಳುವಂತಾಯಿತು. ಅವರ ದಾಸ್ಯದಿಂದ ದೇಶದ ಸಂಪತ್ತು, ಸಂಪನ್ಮೂಲಗಳು ನಷ್ಟವಾಗಿ ಈಗಲೂ ಅದರ ಪರಿಣಾಮವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದೇಶೀಯತೆಯ ಭಾವನೆಯೊಂದಿಗೆ ಉನ್ನತ ಯೋಚನೆಗಳೊಂದಿಗೆ ನಿರ್ದಿಷ್ಟ ಗುರಿಯತ್ತ ಚಿಂತನೆ ಮಾಡಿ, ಅನುಷ್ಠಾನಕ್ಕೆ ತರಲು ಎಲ್ಲರೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ವೈಯಕ್ತಿಕ ಹಿತಾಸಕ್ತಿ ಬಿಟ್ಟು ಜನಪರ ಕಾಳಜಿಯಿಂದ ಸಮಾಜದ ಹಿತಕ್ಕಾಗಿ ದುಡಿದ ವ್ಯಕ್ತಿ ಸಾಧನೆಯ ಎತ್ತರಕ್ಕೆ ಏರುವನು. ಸಮಾಜ ಗುರುತಿಸಿ ಗೌರವಿಸುವುದು. ಓದು, ಅಧ್ಯಯನದಲ್ಲಿಯೂ ಗುರಿ, ಉದ್ದೇಶಗಳನ್ನು ಒಂದಾಗಿ ಮಾಡಿಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ, ಪ್ರತಿಯೊಬ್ಬರಲ್ಲಿಯೂ ವಿಶಿಷ್ಟ ವ್ಯಕ್ತಿತ್ವ ಇರುತ್ತದೆ. ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಉತ್ತಮ ಕೆಲಸಗಳಿಗೆ ಬಳಸಿಕೊಂಡಾಗ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಅದು ವಿವೇಕಾನಂದರ ಆದರ್ಶ ಭಾರತದ ಮರುಸೃಷ್ಟಿಗೆ ನೆರವಾಗುವುದು ಎಂದು ನುಡಿದರು.
ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಹಿಂದುಳಿದ ವರ್ಗಗಳ ಸಮಿತಿ ಸಂಯೋಜನಾಧಿಕಾರಿ ಕುಮಾರ ಸಿದ್ಧಮಲ್ಲಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.