ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲಿಸಿದ ಸಚಿವ ಭೈರತಿ

ದಾವಣಗೆರೆ, ಜ.11- ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸುವ ಉದ್ದೇಶ ದಿಂದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೋಮವಾರ ಬೆಳ್ಳಂಬೆಳಿಗ್ಗೆ ನಗರ ಪ್ರದಕ್ಷಿಣಿ ಕೈಗೊಂಡಿದ್ದರು.

ಸಿಮೆಂಟ್ ರಸ್ತೆ, ರಾಜ ಕಾಲುವೆ ನಿರ್ಮಾಣ ಸೇರಿದಂತೆ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ, ತೀವ್ರ ಅಸಮಾದಾನಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ 10 ಕಿ.ಮೀ. ಉದ್ದದ ರಾಜ ಕಾಲುವೆ ಕಾಮಗಾರಿ ವೀಕ್ಷಿಸಿ  ಸ್ಲ್ಯಾಬ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ ಕಾಲುವೆಯನ್ನು ಕೆಲವೆಡೆ ಸಣ್ಣದಾಗಿ ನಿರ್ಮಿಸಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಎಲ್ಲವನ್ನೂ ಸರಿಯಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗುತ್ತಿಗೆದಾರನಿಗೆ ನೋಟೀಸ್ : ಬಾಪೂಜಿ ಸಮುದಾಯ ಭವನದ ಮುಂಭಾಗದ ರಿಂಗ್  ರಸ್ತೆ ಕಾಮಗಾರಿ ವೀಕ್ಷಿಸಿದ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾರು ಇದರ ಗುತ್ತಿಗೆ ದಾರರು ಎಂದು ಪ್ರಶ್ನಿಸಿದಾಗ, ಪಕ್ಕದಲ್ಲಿ ಯೇ ಇದ್ದ ಸಂಸದ ಸಿದ್ದೇಶ್ವರ್, ಉದಯ ಕುಮಾರ್ ಎಂಬ ಗುತ್ತಿಗೆದಾರನದ್ದು. ನಗರದ ತುಂಬೆಲ್ಲಾ ಅವರದ್ದೇ ಕಾಮಗಾರಿ ಗಳಿವೆ. ಸರಿಯಾಗಿ ಮಾಡುತ್ತಿಲ್ಲ ಎಂದರು.

ಕಾಮಗಾರಿ ಸರಿಯಾಗಿ ಮಾಡದಿದ್ದರೆ ಕ್ರಿಮಿಲ್ ಮೊಕದ್ದಮೆ ಹಾಕಿ. ಅವರು ಯಾರೇ ಆಗಿರಲಿ, ನಾನು ಇಂತಹ ಕೆಲಸಗಳನ್ನು ಸಹಿಸುವುದಿಲ್ಲ ಕೂಡಲೇ ಗುತ್ತಿಗೆದಾರರಿಗೆ ನೊಟೀಸ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಮೀಪದಲ್ಲಿಯೇ ರಸ್ತೆ ಬದಿಯ ಕಸದ ರಾಶಿ ಕಂಡು ತೀವ್ರ ಅಸಮಾಧಾನಗೊಂಡ ಸಚಿವರು, ಪಾಲಿಕೆಯಿಂದ ಪ್ರತಿವಾರ 50 ಜನರ ತಂಡ ಎರಡೆರಡು ವಾರ್ಡ್‍ನಲ್ಲಿ ಸ್ವಚ್ಛತೆ ಮಾಡಬೇಕು. ಮುಂದೆ ಇದೇ ರೀತಿ ಇದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕುಂದುವಾಡ ಕೆರೆ ಪಕ್ಕದ ರಾಜ ಕಾಲುವೆ ವೀಕ್ಷಿಸಿದ ಸಚಿವರು, ಈ ರಾಜ ಕಾಲುವೆ ಅಗಲವಾಗಿದ್ದು, ನೀರು ಸರಾಗವಾಗಿ ಹರಿಯುತ್ತದೆ. ಇಲ್ಲಿನ ಕೆಲಸವೂ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಚಿವರ ನಗರ ವೀಕ್ಷಣೆ ಸಂದರ್ಭದಲ್ಲಿ ಅವರೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್,  ಪಾಲಿಕೆ ಮೇಯರ್ ಬಿ.ಜಿ. ಅಜಯ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಸ್ಮಾರ್ಟ್‍ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರಿದ್ದರು.

error: Content is protected !!