ಕೊಂಡಜ್ಜಿ : ಎಸ್ಟಿ ಸರ್ಕಾರಿ ನೌಕರರ ಕಾರ್ಯಾಗಾರದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್
ಕೊಂಡಜ್ಜಿ, ಜ.11- ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ನೌಕರರು ಬಹಳ ಒತ್ತಡದಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ. ಆನಂದ್ ಅಭಿಪ್ರಾಯಪಟ್ಟರು.
ಕೊಂಡಜ್ಜಿಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನೌಕರರಿಗಾಗಿ ಕಳೆದ ವಾರ ಹಮ್ಮಿಕೊಂಡಿದ್ದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅರಿವು ಮತ್ತು ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಿದಾಗ ಮಾತ್ರ ಉತ್ತಮ ಯಶಸ್ಸು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರಾದ ನಾವು ಎಷ್ಟೇ ಒತ್ತಡ, ಕಷ್ಟ ಬಂದರೂ ಅವುಗಳನ್ನು ನಿಭಾಯಿಸುವಂತಹ ಶಕ್ತಿ, ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಕೆಲಸದ ಬಗ್ಗೆ ನಾವು ಎಷ್ಟೇ ತಿಳಿದುಕೊಂ ಡಿದ್ದರೂ ಕಡಿಮೆಯೇ ಆಗಿರುತ್ತದೆ. ಪ್ರತಿದಿನ ನಿಯಮಗಳು ಬದಲಾವಣೆ ಆಗುತ್ತಿರುತ್ತವೆ. ಹಾಗಾಗಿ ನೌಕರರಿಗೆ ನಾಗರಿಕ ಸೇವಾ ನಿಯಮಾವಳಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಆನಂದ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ಮಾತನಾಡಿ, ಎಲೆಮರೆ ಕಾಯಿಯಾಗಿ ನೌಕರಿ ಮಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ನೌಕರರಿಗೆ ನೆಮ್ಮದಿ ಇಲ್ಲದಂತಾಗಿದ್ದು, ಪದೋನ್ನತಿ ವಿಚಾರದಲ್ಲೂ ನಮಗೆ ತಾರತಮ್ಮ ಆಗುತ್ತಿದೆ. ಆದ್ದರಿಂದ ನಾವು ಸಂವಿಧಾನ ಬದ್ಧ ಹಕ್ಕಿಗಾಗಿ ಸಂಘಟನೆ ಮೂಲಕ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮಣ್ಣನವರ್ ಮಾತನಾಡಿ, ಅನಾವಶ್ಯಕ ಹಸ್ತಕ್ಷೇಪದಿಂದಾಗಿ ನೌಕರರು ನೆಮ್ಮದಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಸಂಘಟನೆಗಳು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಪಾಲಾಕ್ಷಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್, ವಕೀಲ ಗುಮ್ಮ ನೂರು ಮಲ್ಲಿಕಾರ್ಜುನ್, ನಿವೃತ್ತ ಖಜಾನಾಧಿ ಕಾರಿ ಎಂ. ಬಸವರಾಜ್ ಮಾತನಾಡಿದರು.
ರಾಜ್ಯ ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ. ನಾಗರಾಜ್, ಲೋಕೇಶ್ ನಾಯಕ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್, ಎಸ್.ಕೆ. ಸ್ವಾಮಿ, ಪರಮೇಶ್ ಪುಟ್ಟಪ್ಪನವರ್, ಗುಂಡಪ್ಪ, ಜಿ. ಅಣ್ಣಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.
ಶ್ರೀಮತಿ ಶೃತಿ ಪ್ರಾರ್ಥಿಸಿದರು.