ದಾವಣಗೆರೆ, ಜ.8- ಆನ್ಲೈನ್ ತರಗತಿ ಎಂದು ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರು, ಮಕ್ಕಳ ಮೇಲೆ ನಿಗಾ ವಹಿಸುವುದು ಅತ್ಯಗತ್ಯವಾಗಿದೆ.
ಇತ್ತೀಚೆಗೆ ಕೆಲ ವಿದ್ಯಾರ್ಥಿಗಳು ಫ್ರೀ ಫೈರ್ ಗೇಮ್ ಆಟಕ್ಕೆ ಮನಸೋತು ಹಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಆಟದ ಚಟ ಹತ್ತಿಸಿಕೊಂಡವರು ಗೇಮ್ ಮುಂದುವರೆ ಸಲು ಹಣ ಬೇಕಾದಾಗ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಘಟನೆಗಳೂ ನಗರದಲ್ಲಿ ನಡೆದಿವೆ.
ಹೌದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗುವ ಫ್ರೀ ಫೈರ್ ಗೇಮ್ ಇತ್ತೀಚಿನ ದಿನ ಗಳಲ್ಲಿ ಮಕ್ಕಳ ಫೇವರಿಟ್ ಗೇಮ್ ಆಗುತ್ತಿದೆ. ಆರಂಭದಲ್ಲಿ ಆಟ ಉಚಿತವಾಗಿದ್ದರೂ ನಂತರ ಆಟ ಮುಂದುವರೆಸಲು ಹಣ ಕಳೆದುಕೊಳ್ಳಬೇಕಾಗುತ್ತದೆ.
ಈ ಮೊಬೈಲ್ ಆಟದಲ್ಲಿ ರೀಡಿಮ್ ಕೋಡ್ ಖರೀದಿಸಿದರೆ ಸಿಗುವ ಪಾಯಿಂಟ್ಗಳ ಮೂಲಕ ಆಟ ಮುಂದುವರೆಯುತ್ತದೆ. ಇದಕ್ಕಾಗಿ ಮಕ್ಕಳು ಹಣಕ್ಕಾಗಿ ಪೋಷಕರಿಗೆ ದುಂಬಾಲು ಬೀಳುತ್ತಿದ್ದಾರೆ. ಪೋಷಕರಿಗೆ ಗೊತ್ತಾಗದಂತೆ ಆಟವಾಡುವ ಮಕ್ಕಳು ಅವರಿಗೆ ಗೊತ್ತಾಗದಂತೆಯೇ ಹಣ ಜೋಡಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ನಿಗಾ ವಹಿಸಬೇಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್.
ಮೊಬೈಲ್ನಲ್ಲಿ ಫೋನ್ ಪೇ, ಗೂಗಲ್ ಪೇ ಅಂತಹ ಆಪ್ಗಳ ಮೂಲಕವೂ ಗೇಮ್ ಗೆ ಬೇಕಾದ ರೀಡಿಮ್ ಕೋಡ್ ಖರೀದಿ ಸಬಹುದಾಗಿದೆ. ಮಕ್ಕಳಿಗೆ ಈ ಆಪ್ಗಳ ಪಾಸ್ವರ್ಡ್ ತಿಳಿದಿದ್ದರೆ ನಿಮ್ಮ ಅಕೌಂಟ್ ನಲ್ಲಿ ಹಣ ಖಾಲಿಯಾದಂತೆಯೇ ಸರಿ.
ರೀಡಿಂ ಕೋಡ್ ರೀಚಾರ್ಚ್ : ಮೊಬೈಲ್ಗೆ ರೀಚಾರ್ಜ್ ಮಾಡಿಸಿದಂತೆ ಈ ರೀಡಿಮ್ ಕೋಡ್ಗಳ ರೀಚಾರ್ಜ್ ಸಹ ಮಾಡಲಾಗುತ್ತಿದೆ. ಕೆಲ ಮೊಬೈಲ್ ಅಂಗಡಿ ಮಾಲೀಕರು ಮಕ್ಕಳು ಕೇಳಿದಾಕ್ಷಣ ಈ ಕೋಡ್ ರೀಚಾರ್ಜ್ ಮಾಡಿಕೊಡುತ್ತಾರೆ. 80 ರಿಂದ 4 ಸಾವಿರ ರೂ.ಗಳ ವರೆಗೆ ಹಣ ನೀಡಿ ಮಕ್ಕಳು ಕೋಡ್ ಖರೀದಿಗೆ ಮುಂದಾಗುತ್ತಿದ್ದಾರೆ.
ಇಂತಹ ರೀಡಿಮ್ ಕೋಡ್ ಪಡೆಯಲು ಮಕ್ಕಳು ಮುಂದಾದಾಗ ಅಂಗಡಿ ಮಾಲೀಕರು ತುಸು ವಿಚಾರಿಸಬೇಕಿದೆ. ಮಕ್ಕಳ ಪೋಷಕರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಬೇಕಿದೆ. ಇದರಿಂದ ಮಕ್ಕಳು ಅಡ್ಡ ದಾರಿ ಹಿಡಿಯುವುದು ತಪ್ಪುತ್ತವೆ. ಪರವಾನಗಿ ಪಡೆಯದ ಕೆಲ ಗೇಮ್ ಸೆಂಟರ್ಗಳೂ ಸಹ ಈ ಆಟಕ್ಕೆ ಅನುವು ಮಾಡಿಕೊಡುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ಬಾಲ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಎಂ.ಜಿ. ಶ್ರೀಕಾಂತ್ ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳೂ ಸಹ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ನೀಡಿಸಲು ಮುಂದಾಗಬೇಕಿದೆ. ಈಗಾಗಲೇ ರೀಡಿಮ್ ಕೋಡ್ ರೀಚಾರ್ಚ್ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ. ಮಕ್ಕಳ ಆಯೋಗಕ್ಕೂ ದೂರು ನೀಡಿದ್ದೇವೆ ಎಂದು ಶ್ರೀಕಾಂತ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಂಡೋಸ್ ಕಂಪ್ಯೂಟರ್ ಸೆಂಟರ್ ಮಾಲೀಕ ಇ.ಬಸವರಾಜ್ ಉಪಸ್ಥಿತರಿದ್ದರು.