ಸಾವಿತ್ರಿಬಾಯಿ ಫುಲೆ ಅನುಪಮ ಸಮಾಜ ಸುಧಾರಕಿ, ಅನನ್ಯ ಶಿಕ್ಷಕಿ

ಹೊನ್ನಾಳಿ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಬಣ್ಣನೆ

ಹೊನ್ನಾಳಿ, ಜ.5- ದೇಶದ ಪ್ರಥಮ ಶಿಕ್ಷಕಿ ಎಂಬ ಹಿರಿಮೆಯ ಸಾವಿತ್ರಿಬಾಯಿ ಫುಲೆ ಅನುಪಮ ಸಮಾಜ ಸುಧಾರಕಿ, ಅನನ್ಯ ಶಿಕ್ಷಕಿ ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬಣ್ಣಿಸಿದರು.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಗುರುಭ ವನದಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮೇಲ್ಜಾತಿಯ ಪುರುಷರು, ಉಳ್ಳವರು ಹಾಗೂ ಒಂದು ಭಾಷಾ ವರ್ಗದವರ ಸ್ವತ್ತಾಗಿದ್ದ ಶಿಕ್ಷಣವನ್ನು ಎಲ್ಲರಿಗೂ, ವಿಶೇಷವಾಗಿ ಮಹಿಳೆಯರಿಗೆ ನೀಡಲು ಇನ್ನಿಲ್ಲದಂತೆ ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಪ್ರಾತಃಸ್ಮರಣೀಯರು. ಅವರಿಲ್ಲದಿದ್ದರೆ, ಮಹಿಳೆಯರು ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದು ತಿಳಿಸಿದರು.

ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಅಕ್ಷರದ ಗಂಧ-ಗಾಳಿಯೇ ಇಲ್ಲದ ಸಂದರ್ಭ ದಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ `ಅಕ್ಷರದವ್ವ’ ಎಂದು ಹೆಸರಾಗಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೇ ಅವರು 18 ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಸ್ಮರಣೀಯವಾದುದು. 

ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿ ಗಮನಿಸಿದ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ `ಇಂಡಿಯನ್ ಫಸ್ಟ್ ಲೇಡಿ ಟೀಚರ್’ ಎಂಬ ಬಿರುದು ನೀಡಿ ಗೌರವಿಸಿತ್ತು. ಅವರ ಕಾರಣಕ್ಕಾಗಿಯೇ ಇಂದು ಮಹಿಳೆಯರು ಶಿಕ್ಷಣ, ರಾಜಕೀಯ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಇಂತಹ ಧೀಮಂತ ಮಹಿಳೆಯ ಜನ್ಮ ದಿನವನ್ನು ಆಚರಿಸುತ್ತಿರುವುದು ಮಾದರಿಯಾದುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್. ಷಹಜಾನ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಬಾಲ್ಯವಿವಾಹದ ಸಂಕೋಲೆಯಲ್ಲಿ ತಾವೇ ಸ್ವತಃ ಬಂಧಿಯಾಗಿದ್ದರೂ ಲೆಕ್ಕಿಸದೇ ನಾಳಿನ ಭವಿಷ್ಯದ ಬಗ್ಗೆ ನಾಡಿನ ಜನತೆಯ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಶ್ರಮಿಸಿದರು. ಶಿಕ್ಷಕ ಸಮೂಹಕ್ಕೆ ಅವರು ಆದರ್ಶ, ಪ್ರೇರಣಾ ಶಕ್ತಿ, ಆಶಾಕಿರಣ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ, ಬಿಆರ್‍ಪಿಗಳಾದ ನಾಗರತ್ನಮ್ಮ, ಜಿ.ಕೆ. ಅರುಣ್‍ಕುಮಾರ್, ಶಿಕ್ಷಕಿ ಲತಾ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷೆಯರಾದ ಪುಷ್ಪಲತಾ ಕೆ. ತೇಜಮೂರ್ತಿ, ಎಚ್. ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ರಂಜಿತಾ ಮತ್ತಿತರರು ಮಾತನಾಡಿದರು.

ಪಿಎಸ್‌ಐ ಬಸನಗೌಡ ಬಿರಾದಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇ ಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್. ರುದ್ರೇಶ್, ಉಪಾಧ್ಯಕ್ಷ ಪುರು ಷೋತ್ತಮ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷೆ ಗೀತಾ ದೊಡ್ಡಪ್ಪ, ಸಂಘ ಟನಾ ಕಾರ್ಯದರ್ಶಿಗಳಾದ ನಳಿನಾ, ಗಿರಿಜಮ್ಮ, ಕಾರ್ಯ ಕಾರಿಣಿ ಸದಸ್ಯೆ ಉಷಾ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಜೆ.ಎಚ್. ಸುರೇಶ್ ಗೆಜ್ಜುರಿ ಮತ್ತು
ಎಸ್. ಷಹಜಾನ್ ಅವರನ್ನು, ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ಹಾಗೂ ಇತರರನ್ನು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.

error: Content is protected !!