ಹರಿಹರ, ಜ. 4 – ತಾಲ್ಲೂಕಿನ ತುಂಗಭದ್ರಾ ನದಿ ತಟದಲ್ಲಿ ಭಾನುವಾರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು.
ಹರಜಾತ್ರೆ ಮತ್ತು ಮಕರ ಸಂಕ್ರಮಣ ಹಾಗೂ ನನ್ನ ಊರು ನನ್ನ ಹೊಣೆಯ ಸ್ಥಳೀಯ ಸಂಸ್ಥೆ ಸಹಕಾರದಿಂದ ಸ್ವಚ್ಚತೆ ನೆರವೇರಿಸಿದರು. ಸತತ ಎರಡನೇ ವಾರ ಶ್ರೀಗಳ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು.
ಪ್ರಧಾನ ಮಂತ್ರಿ ಮೋದಿ ಅತ್ಯಂತ ಮಹತ್ವದ ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿದ್ದು, ಗಂಗೆ ಈಗ ಹಿಂದಿಗಿಂತ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ, ಗಂಗೆಯಂತೆ ತುಂಗಭದ್ರಾ ನದಿಯನ್ನೂ ಏಕೆ ಸ್ವಚ್ಛಗೊಳಿಸಬಾರದು ಅನ್ನುವ ಯೋಚನೆ ಬಂದಿತ್ತು. ಊರು ನನ್ನದಾದ ಮೇಲೆ ನದಿ ನನ್ನದಾದ ಮೇಲೆ ಅದನ್ನು ಸಂರಕ್ಷಿಸುವ, ಕಾಯಿಲೆ ಬಿದ್ದಾಗ ಗುಣಪಡಿಸುವ ಹೊಣೆಯೂ ನಮ್ಮದಾಗಿದೆ. ಹೀಗಾಗಿ, ನಮ್ಮ ನೇತೃತ್ವದಲ್ಲಿ ಸ್ಥಳೀಯ ಪರಿಸರ ಸಂಘಟನೆ ನನ್ನ ಊರು ನನ್ನ ಹೊಣೆ ಜೊತೆ ಸೇರಿ ತುಂಗೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದು ಶ್ರೀಗಳು ತಿಳಿಸಿದ್ದಾರೆ.
ಎರಡು ವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಠದ ನೂರಾರು ಭಕ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುವುದರಿಂದ ಹಾಗೂ ನದಿ ತಟದಲ್ಲಿಯೇ ಹಬ್ಬದೂಟ ಮಾಡಿ ಸವಿಯುವುದರಿಂದ ಗಂಗೆ ತಟದ ಸ್ವಚ್ಛತಾ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದಿದ್ದಾರೆ.
ನಮ್ಮನ್ನು ಪೋಷಿಸಿರುವ ಪರಿಸರವನ್ನು ಯಾವತ್ತೂ ಮಲಿನಗೊಳಿಸಬಾರದು. ಪ್ರಮುಖವಾಗಿ ಜೀವ ನದಿಗಳು, ಅವು ಉಸಿರು ನೀಡುತ್ತವೆ. ಹಸಿರು ನೀಡುತ್ತವೆ. ಅನ್ನ ನೀಡುತ್ತವೆ.
ಗೊತ್ತಿರಲಿ ಸ್ವಚ್ಛ ಪರಿಸರ ಸ್ವಚ್ಛ ಭಾರತದ ಸಂಕೇತ. ತುಂಗೆ, ಗಂಗೆಯಂತೆ ಈಗ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ ಎನ್ನಲು ನಮಗೆ ಸಂತೋಷವಾಗುತ್ತಿದೆ ಎಂದು ತಮ್ಮ ಸಂದೇಶದಲ್ಲಿ ಶ್ರೀಗಳು ತಿಳಿಸಿದ್ದಾರೆ.