ಕೊಂಡಜ್ಜಿ, ಜ.2- ನಮ್ಮ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲೂ ನಡೆಯಬೇಕು. ಆ ಮೂಲಕ ಸರ್ಕಾರ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗು ತ್ತದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ಇಲ್ಲಿನ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿನ್ನೆ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ-2021 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಕಲಾವಿದರಿಗೆ ಮಾಸಾಶನ ನೀಡಬೇಕು ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಹೇಳಿದ ರಾಮಪ್ಪ ಅವರು, ಬುಡಕಟ್ಟು ಕಲೆಯನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಈ ಗಿರಿಜನ ಉತ್ಸವವನ್ನು ಪ್ರತಿ ಹಳ್ಳಿಯಲ್ಲೂ ಏರ್ಪಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದ ದಾವಣಗೆರೆ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಶಾಂತಕುಮಾರಿ ಮಾತನಾಡಿ, ಧಾರಾವಾಹಿಗಳ ಹಾವಳಿಯಿಂದಾಗಿ ಟಿ.ವಿ ಮಾಧ್ಯಮಗಳಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಕಣ್ಮರೆ ಆಗುತ್ತಿರುವ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಇಲಾಖೆಯವರು ಇಂತಹ ಉತ್ಸವದ ಮೂಲಕ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಶ್ರೀನಿವಾಸ್ ನಾಯಕ, ಉಪಾಧ್ಯಕ್ಷ ಪರಮೇಶ್ ಪುಟ್ಟಪ್ಪನವರ್, ಕಾರ್ಯದರ್ಶಿ ಗೋವಿಂದರಾಜ್, ಎಸ್.ಕೆ.ಸ್ವಾಮಿ, ದಾಗಿನಕಟ್ಟೆ ಪರಮೇಶ್ವರಪ್ಪ, ಗುಂಡಪ್ಪ, ಜಿ.ಅಣ್ಣಪ್ಪ ಇಲಾಖೆಯ ಲಕ್ಷ್ಮಿದೇವಿ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯಪ್ಪ ನಿರೂಪಿಸಿದರೆ, ಇಲಾಖೆಯ ಬಸವರಾಜ್ ವಂದಿಸಿದರು.
ಗಿರಿಜನ ಉತ್ಸವದಲ್ಲಿ ಜಗಳೂರಿನ ಪಾತಯ್ಯ ತಂಡದವರು ನಡೆಸಿಕೊಟ್ಟ ಬುಡಕಟ್ಟು ಸಮುದಾಯದ ಪೋತರಾಜನ ಕುಣಿತ, ಚಿಕ್ಕಮಗಳೂರಿನ ರೇಖಾ ಮತ್ತು ತಂಡದ ಮಹಿಳಾ ವೀರಗಾಸೆ, ನಂಜನಗೂಡಿನ ಹೇಮಂತ್ ಕುಮಾರ್ ತಂಡದ ಹುಲಿವೇಶ ನೃತ್ಯ, ಚಳ್ಳಕೆರೆಯ ರಾಘವೇಂದ್ರ ತಂಡದ ಗಾರುಡಿ ಗೊಂಬೆ ಪ್ರದರ್ಶನ, ಚಿಕ್ಕಹಟ್ಟಿಯ ಹುಣಕಾರನಾಯ್ಕ ತಂಡದ ವೀರಮಕ್ಕಳ ಕುಣಿತ, ತುಮಕೂರಿನ ರವಿ ತಂಡದ ನಂದಿಧ್ವಜ, ಚನ್ನಾಪುರದ ಅಜ್ಜಪ್ಪ ತಂಡದ ಕರಡಿ ಮಜುಲು, ಮಕ್ಕಹಳ್ಳಿಯ ಶಿವನಾಯ್ಕ ತಂಡದ ತಮಟೆ, ಚನ್ನಗಿರಿಯ ರಾಜಪ್ಪ ತಂಡದ ಜಾನಪದಲ್ಲಿ ಗೀತೆಗಳು, ಬಿಳಿಚೋಡಿನ ಕೆ.ಆರ್.ನಾಗರಾಜ್ ತಂಡ ಭಜನೆ ಎಲ್ಲರ ಗಮನ ಸೆಳೆದವು.