ಮಲೇಬೆನ್ನೂರು, ಮಾ.13- ಮಳಲಹಳ್ಳಿ ಗ್ರಾಮದಲ್ಲಿ ಜಮೀನು ಒತ್ತುವರಿ ಮಾಡಿ ವಾಸವಾಗಿದ್ದರು ಎನ್ನಲಾದ 5 ಕುಟು೦ಬಗಳನ್ನು ಮತ್ತು 10 ನಿವೇಶನಗಳನ್ನು ಕೋರ್ಟ್ ಆದೇಶದ ಮೇರೆಗೆ ಶನಿವಾರ ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಿಸಲಾಯಿತು. ಎಳೆಹೊಳೆ ಗ್ರಾಮದ ಓಂಕಾರಪ್ಪ ಎಂಬುವವರು ನಮ್ಮ ಜಮೀನನ್ನು 15 ಜನ ಒತ್ತುವರಿ ಮಾಡಿದ್ದಾರೆಂದು 1997 ರಲ್ಲಿ ಕೋರ್ಟ್ ಮೊರೆ ಹೋಗಿದ್ದರು ಎನ್ನಲಾಗಿದೆ. ಸುದೀರ್ಘ ವಿಚಾರಣೆ ನಂತರ ಹೈಕೋರ್ಟ್ ಜ್ಯೂನಿಯರ್ ವಿಭಾಗ ಒತ್ತುವರಿ ಮಾಡಿರುವ ಜಮೀನನ್ನು ಬೀಡುವಂತೆ ಆದೇಶ ಮಾಡಿತ್ತು. ಕೋರ್ಟ್ ಆದೇಶ ಪಾಲಿಸದೇ ಇದ್ದುದ್ದರಿಂದ ಶನಿವಾರ ಸ್ಥಳಕ್ಕೆ ಆಗಮಿಸಿದ ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾ.ಪಂ ಇಓ ಗಂಗಾಧರ್, ಸಿಪಿಐ ಸತೀಶ್, ಪಿಎಸ್ಐ ರವಿಕುಮಾರ್ ಅವರುಗಳ ನೇತೃತ್ವದಲ್ಲಿ ಒತ್ತುವರಿ ತೆರವು ಮಾಡಿಸಲಾಯಿತು. ಶಾಸಕ ಎಸ್.ರಾಮಪ್ಪ ಅವರು ವಾಸವಾಗಿದ್ದವರ ಪರ ಅಧಿಕಾರಿಗಳಿಗೆ ಹೇಳಲು ಮುಂದಾದಾಗ ಅಧಿಕಾರಿಗಳು ಕೋರ್ಟ್ ಆದೇಶ ತೋರಿಸಿದಾಗ ಸುಮ್ಮನಾದರೆಂದು ಸ್ಥಳೀಯರು ತಿಳಿಸಿದರು. ಎಳೆಹೊಳೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿಡಿಓ ಈ ವೇಳೆ ಹಾಜರಿದ್ದರು.
January 10, 2025