ಮೊಬೈಲ್ ರೀಚಾರ್ಜ್ ದರ ಹೆಚ್ಚಳ ಖಂಡಿಸಿ ಇ-ಮೇಲ್ ಚಳುವಳಿ

ದಾವಣಗೆರೆ, ಫೆ.3- ಮೊಬೈಲ್ ರೀಚಾರ್ಜ್ ದರ ಹಾಗೂ ಡಾಟಾ ಟ್ಯಾರಿಫ್ ಹೆಚ್ಚಳ ಮಾಡಿರುವ ಖಾಸಗಿ ಟೆಲಿಕಾಂ ಕಂಪನಿಗಳ ಕ್ರಮವನ್ನು ಖಂಡಿಸಿ ಎಐಡಿಎಸ್‍ಓ-ಎಐಡಿವೈಓ ಸಂಘಟನೆಗಳ ವತಿಯಿಂದ ದೇಶವ್ಯಾಪಿ ಸಾಮೂಹಿಕ ಇ-ಮೇಲ್ ಚಳವಳಿ ನಡೆಸಲಾಯಿತು.

ಕೋವಿಡ್ ಕಾರಣ ದೇಶವ್ಯಾಪಿ ಕಳೆದ 3 ವರ್ಷಗಳಿಂದ ಲಾಕ್ ಡೌನ್, ಕರ್ಫ್ಯೂಗಳಿಂದಾಗಿ ಈಗಾಗಲೇ ಸಾಮಾನ್ಯ ಜನರು ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆದಾಯ ಕಡಿತಗಳಿಂದಾಗಿ ಬಳಲುತ್ತಿರುವಾಗ ಖಾಸಗಿ ಟೆಲಿಕಾಂ ಕಂಪೆನಿಗಳು ವೇಗವಾಗಿ ಕೇವಲ ಒಂದು ವರ್ಷದಲ್ಲಿ ಸುಮಾರು ಶೇ. 80 ರಿಂದ 100 ರಷ್ಟು ಬೆಲೆ ಏರಿಕೆ ಮಾಡಿರುವುದು ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ಅಸಮಾಧಾನ ವ್ಯಕ್ತಪಡಿಸಲಾಯಿತು.

ಚಳವಳಿಯಲ್ಲಿ ದಾವಣಗೆರೆಯ ಎಐಡಿಎಸ್‍ಓ – ಎಐಡಿವೈಓ ಜಿಲ್ಲಾ ಸಮಿತಿಗಳಿಂದ ವಿವಿಧ ಕಾಲೇಜುಗಳು ಮತ್ತು ಹಾಸ್ಟೆಲ್‍ಗಳಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಯಿತು. ಎಐಡಿಎಸ್‍ಓ – ಎಐಡಿವೈಓನ ಪೂಜಾ, ಅನಿಲ್, ಕಿರಣ್, ಕಾವ್ಯ, ಶಶಿಕುಮಾರ್, ಪುಷ್ಪಾ ಸೇರಿದಂತೆ, ಇತರರು ಚಳುವಳಿಯಲ್ಲಿ ಭಾಗವಹಿಸಿದ್ದರು.

error: Content is protected !!