ಕೊಟ್ಟೂರು, ಫೆ.16- ನಗರದಲ್ಲಿ ಬೀಡು ಬಿಟ್ಟಿದ್ದ ಕೋತಿಗಳ ಕಪಿ ಚೇಷ್ಟೆಗೆ ಪಟ್ಟಣ ಪಂಚಾಯಿತಿ ಎಚ್ಚೆತ್ತುಕೊಂಡು, ಅವುಗಳನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಮೂಲಕ ಸಾರ್ವಜನಿಕ ಹಿತ ಕಾಪಾಡಿದೆ.
ನಗರದಲ್ಲಿ ವಿವಿಧೆಡೆ ಕೋತಿಗಳ ಉಪಟಳ ಹೆಚ್ಚಾಗಿದ್ದರಿಂದ ಊರಿನ ಜನರು ಮನೆಯಿಂದ ಹೊರಬರಲು ಭಯ ಪಡುವಂತಾಗಿತ್ತು. ಬಸ್ ನಿಲ್ದಾಣ, ಶಾಲೆ ಹಾಗೂ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವೃದ್ಧರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ನಡೆಸಿ ಗಾಯ ಗೊಳಿಸಿದ ಘಟನೆಗಳು ನಡೆದಿವೆ.
ಕೋತಿಗಳ ಹಾವಳಿಗೆ ಬೇಸತ್ತ ಜನರು, ಇವುಗಳ ನಿಯಂತ್ರಕ್ಕಾಗಿ ದೂರು ನೀಡಿದ ತಕ್ಷಣವೇ ಪಟ್ಟಣ ಪಂಚಾಯತಿ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿತು.
ಬೈರ ದೇವರಗುಡ್ಡ ಗ್ರಾಮದ ನಾಗೇಂದ್ರಪ್ಪ ಹಾಗೂ ಅರಣ್ಯ ಸಿಬ್ಬಂದಿ ಸುರೇಶ್, ಮಂಜುನಾಥ್ ಮತ್ತು ಸಂಸ್ಥೆಯ ಸಿಬ್ಬಂದಿ ನೆರವಿನೊಂದಿಗೆ 20ಕ್ಕೂ ಅಧಿಕ ಮಂಗಳನ್ನು ಸೆರೆ ಹಿಡಿಯಲಾಯಿತು.
`ನಗರದಲ್ಲಿ ಮಂಗಗಳ ಚೇಷ್ಟೆಗಳಿಂದಾಗಿ ನಾಗರಿಕರು ಓಡಾಡುವುದು ದುಸ್ತರವಾಗಿತ್ತು, ಹಾಗಾಗಿ ಕೋತಿಗಳನ್ನು ಬಂಧಿಸಿ ಕಮಲಾಪುರ ಅರಣ್ಯದಲ್ಲಿ ಬಿಡಲಾಗುವುದು’ ಎಂದು ಪ.ಪಂ ಮುಖ್ಯಾಧಿಕಾರಿ ನಸ್ರುಲ್ಲಾ ತಿಳಿಸಿದರು.
ಮಂಗಗಳನ್ನು ಬಂಧಿಸಿದ ನಾಗೇಂದ್ರಪ್ಪ ಮತ್ತು ಅರಣ್ಯ ಇಲಾಖೆಯ ಸುರೇಶ್ ಅವರಿಗೆ ಗ್ರಾಮದ ಮುಖಂಡರು ಹಾಗೂ ಪಟ್ಟಣ ಪಂಚಾಯತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.