ರಾಣೇಬೆನ್ನೂರು, ಫೆ. 16 – ಶೀಘ್ರದಲ್ಲಿ ಸಚಿವ ಮಧು ಬಂಗಾರಪ್ಪ, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅನುದಾನಿತ ಕಾಲೇಜು ನೌಕರರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ನೌಕರರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಂಡು, ಅವರ ಬೇಡಿಕೆಗಳ ಇತ್ಯರ್ಥಕ್ಕೆ ಸೂಕ್ತ ಕ್ರಮ ಜರುಗಿಸುವುದಾಗಿ ವಿಧಾನ ಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರ ಹಾವೇರಿ ಜಿಲ್ಲಾ ಘಟಕ ಉದ್ಘಾಟಿಸಿ, ಅವರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಸಹ ಸಂಸ್ಥೆಯಿಂದ ವಿದ್ಯಾಲಯಗಳನ್ನು ನಡೆಸುತ್ತಿದ್ದೇನೆ. ವಿಶೇಷ ತರಗತಿಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಚಾರ್ಯರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಶ್ರಮಿಸಿದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ನನಗೆ
ಗೊತ್ತಿದೆ, ಆದರೆ `ಸಂತೆ ಮಾಡಲು ರೊಕ್ಕ ಸಿಕ್ಕರೆ ಸಾಕು’ ಎನ್ನುವ ಆಡಳಿತದಿಂದ ಕ್ವಾಲಿಟಿ, ಕ್ವಾಂಟಿಟಿ ಎರಡೂ ಸಿಗಲಾರದು ಎಂದು ಬಿಎಜೆಎಸ್‌ಎಸ್ ಸಂಸ್ಥೆಯ ಚೇರ್ಮನ್ ರೂ ಆದ ಉಪಸಭಾಪತಿ ರುದ್ರಪ್ಪ ಲಮಾಣಿ ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಈ ಪದವಿ ಪೂರ್ವ ಹಂತದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಕಾರಣ ಅವರ ಉತ್ತಮ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಕೊಡುವಂತೆ ಹಾಗೂ ಜನಸಂಖ್ಯೆಯ ಅರ್ಧದಷ್ಟು ಅಂದರೆ 70 ಕೋಟಿಯಷ್ಟು ಇರುವ ಮಹಿಳೆಯರೂ ಸಹ ಉತ್ತಮ ಶಿಕ್ಷಣ ಪಡೆದು, ಅಭಿವೃದ್ಧಿಯಲ್ಲಿ ಪಾಲುದಾರರು ಆಗಬೇಕು ಎಂದು ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಪ್ರಕಾಶ ಕೋಳಿವಾಡ ಮನವಿ ಮಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ. ಕುಬೇರಪ್ಪ, ರಾಜ್ಯ ಸಂಘದ ಅಧ್ಯಕ್ಷ ಡಾ. ಹರೀಶ್, ಸಿಂಡಿಕೇಟ್ ಸದಸ್ಯ ರಮೇಶ್ ಲಮಾಣಿ, ಎನ್‌ಎಸ್‌ಎಸ್ ಅಧಿಕಾರಿ ರವಿಕುಮಾರ್ ಅಂಬೋರೆ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದ್ಯಾಮನ ಕೊಪ್ಪ ಮತ್ತಿತರರಿದ್ದರು. ಜಿಲ್ಲಾಧ್ಯಕ್ಷ ಪರಶುರಾಮ ಗಚ್ಚಿನಮನಿ ಅಧ್ಯಕ್ಷತೆ ವಹಿಸಿದ್ದರು.