ಸಂಸತ್ನಲ್ಲಿ ಸಂಸದೆ ಡಾ. ಪ್ರಭಾ ಎಸ್ಸೆಸ್ಸೆಂ
ದಾವಣಗೆರೆ/ನವದೆಹಲಿ, ಫೆ. 7 – ಆಯುಷ್ಮಾನ್ ಭಾರತ್ ಯೋಜನೆ ಅಡಿ ಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಜೊತೆಗೆ, ಆರ್ಥಿಕವಾಗಿ ಹಿಂದುಳಿದವರನ್ನೂ ಪರಿಗಣಿಸಬೇಕೆಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಸ್ತುತ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಲಭ್ಯವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಬಡವರನ್ನು ನಿರ್ಲಕ್ಷಿಸಲಾಗಿತ್ತು.
ಇದನ್ನು ಮನಗಂಡ ಡಾ. ಪ್ರಭಾ ಅವರು, ನವದೆಹಲಿಯ ಸಂಸತ್ತಿನ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರ ಗಮನ ಸೆಳೆಯುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೂ ಆಯುಷ್ಮಾನ್ ಭಾರತ್ ನೀಡುವ ಒತ್ತಾಯದ ಜೊತೆಯಲ್ಲಿ ವೈದ್ಯರು, ಸಂಪನ್ಮೂಲಗಳು ಮತ್ತು ಮೂಲ ಸೌಕರ್ಯಗಳ ಕೊರತೆಯನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳು, ರಾಜ್ಯವಾರು ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವರಲ್ಲಿ ಕೇಳಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪ್ರಥಮಾರ್ಧದ ಪ್ರಶ್ನೆಯನ್ನು ಮತ್ತೊಮ್ಮೆ ಪುನರುಚ್ಚರಿಸುವಂತೆ ಮನವಿ ಮಾಡಿ ಹಂತ ಹಂತವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಪ್ರಭಾ ಅವರ ಪ್ರಶ್ನೆಯ ಪ್ರಾಮುಖ್ಯತೆಯನ್ನು ಮನ ಗಂಡ ಕೇಂದ್ರ ಸಚಿವರು, ಪ್ರಥಮಾರ್ಧದ ಪ್ರಶ್ನೆಯನ್ನು ಪುನರುಚ್ಚರಿಸುವಂತೆ ಕೇಳಿರುವುದು ವಿಶೇಷವಾಗಿದೆ.