ದಾವಣಗೆರೆ, ಡಿ.27- ವಿಶೇಷ ಚೇತನರಿಗೆ ಇರುವ ಶೇ.5ರ ಮೀಸಲಾತಿ ಎಲ್ಲಾ ವಲಯದಲ್ಲಿ ಕಡ್ಡಾಯವಾಗಿ ಪಾಲನೆ ಆಗಲಿ ಎಂದು ಹೊಸಪೇಟೆಯ ಸಾಧ್ಯ ಟ್ರಸ್ಟಿನ ಸಂಸ್ಥಾಪಕಿ ಕೆ.ಟಿ. ಆರತಿ ತಿಳಿಸಿದರು.
ಮಾನಸ ಸಾಧನಾ ವಿಕಲಚೇತನರ ಸೇವಾ ಟ್ರಸ್ಟ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಕಲ ಚೇತನರಿಗಿರುವ ಮೀಸಲಾತಿ ಹಲವೆೆಡೆ ದುರ್ಬಳಕೆ ಆಗುತ್ತಿದೆ. ಹಾಗಾಗಿ ಸರ್ಕಾರಿ ಹಾಗೂ ಖಾಸಗಿ ವಲಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ಶೇ.5ರ ಮೀಸಲಾತಿ ಪಾಲನೆ ಆದಲ್ಲಿ ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ ಎಂದರು.
ಸಮಾಜದಲ್ಲಿನ 21 ತರಹದ ವಿಕಲಚೇತನರು ಒಂದೇ ಎಂದು, ಭಾವಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಗಮನ ಸೆಳೆಯಬಹುದು ಎಂದು ಆಶಯ ವ್ಯಕ್ತಪಡಿಸಿದರು. ವಿಕಲ ಚೇತನರ ಟಾಸ್ಕ್‌ಫೋರ್ಸ್ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಪಂಚಾಯತಿ ಮಟ್ಟದಲ್ಲಿ ಇನ್ನೂ ಹೆಚ್ಚಿನದಾಗಿ ಬಲವಾಗಬೇಕಿದೆ ಎಂದು ತಿಳಿಸಿದರು.
ಜಗಳೂರಿನ ಮಹಾಂತೇಶ ಬ್ರಹ್ಮ ಮಾತನಾಡಿ, ವಿಕಲತೆ ಶಾಪವು ಅಲ್ಲ. ವರವೂ ಅಲ್ಲ. ಭಗವಂತ ಅವರಲ್ಲೂ ಪ್ರತಿಭೆ ಸೃಷ್ಠಿಸಿರುತ್ತಾನೆ. ಪ್ಯಾರಾ ಒಲಂಪಿಕ್ಸ್‌ನಲ್ಲಿ ದೇಶದ ವಿಶೇಷ ಚೇತನರು ಮಾಡಿದ ಸಾಧನೆಯೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಈ ವೇಳೆ ರಾಜ್ಯದ 45 ಜನ ವಿಶೇಷ ಸಾಧನಾ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಹಾಗೂ 5 ವಿಶೇಷ ಆದರ್ಶ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೀಮೋಫಿಲಿಯಾ ಕೇಂದ್ರದ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ, ಸುರೇಶ್ ಭಂಡಾರಿ, ಸಬಿಯಾ ಬೇಗಂ ಮರ್ತೂರ, ಡಾ. ಪುಷ್ಪಲತಾ, ರಶ್ಮಿ ದೇಶಮುಖ್, ಬಿ.ಎಂ ಮಲ್ಲೇಶ್, ವಿಜಯಲಕ್ಷ್ಮೀ, ಪೋತಲ್ ಶ್ರೀನಿವಾಸ್ ಮತ್ತಿತರರಿದ್ದರು.