ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ ಮನಮೋಹನ್ ಸಿಂಗ್-ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ ಅಂಜಿನಪ್ಪ

ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ ಮನಮೋಹನ್ ಸಿಂಗ್-ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ ಅಂಜಿನಪ್ಪ

ಹರಪನಹಳ್ಳಿ, ಡಿ. 27 – ದೇಶದ ಆರ್ಥಿಕತೆಗೆ ಶಕ್ತಿ ತುಂಬಿ, ಹಲವು ಮಹತ್ತರ ಸಾಧನೆಗೆ ಮುನ್ನುಡಿ ಬರೆದು,  ಆರ್‌ಬಿಐ ಗೌರ್ನರ್ ಆಗಿ, ಆರ್ಥಿಕ ಮಂತ್ರಿಯಾಗಿ,   ಭಾರತದ ಪ್ರಧಾನಿಯಾಗಿಯೂ ದೇಶ ಸೇವೆಗೈದ ಮಹಾನ್ ಚೇತನ ಮನಮೋಹನ್ ಸಿಂಗ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಧಾರಣ ಹಿನ್ನೆಲೆಯಿಂದ ಬಂದಂತಹ ಮನ ಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಯ ಮೇಲೆ ‘ದೊಡ್ಡ ಛಾಪು’ ಮೂಡಿಸಿದ್ದಾರೆ. ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುವ ಸಿಂಗ್, ಸರಳ, ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿ ಬೆಳೆದಿದ್ದರು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ  ಟಿ.ವೆಂಕಟೇಶ್ ಮಾತನಾಡಿ,  ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿಗಳಲ್ಲಿ ಮನಮೋಹನ್ ಸಿಂಗ್   ಅವರು ಸಹ ಒಬ್ಬರು. ಅರ್ಥಶಾಸ್ತ್ರದಲ್ಲಿ ಅಪಾರ ವಿದ್ವತ್ತನ್ನು ಹೊಂದಿದ್ದ   ಅವರು,  ಭಾರತವನ್ನು ಬಲಾಢ್ಯ ಆರ್ಥಿಕತೆಯಾಗಿ ಬೆಳೆಸಲು ಬುನಾದಿ ಹಾಕಿದರು. ದೇಶದ ಅರ್ಥಿಕ ವ್ಯವಸ್ಥೆಗೆ ಜೀವ ಚೈತನ್ಯ ತುಂಬಿ, ಅದನ್ನು ಪುನರುತ್ಥಾನಗೊಳಿಸಿದ ಹಿರಿಮೆ ಅವರದಾಗಿತ್ತು. ಅವರ ನಿಧನದಿಂದ ದೇಶವು ಮೇಧಾವಿಯೊಬ್ಬರನ್ನು ಕಳೆದುಕೊಂಡಿದೆ ಎಂದರು

ಪುರಸಭಾ  ಸದಸ್ಯ ಡಿ.ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿ, ದೇಶವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿದ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇವರಿಗೆ ಸಲ್ಲುತ್ತದೆ. ಪಿ.ವಿ. ನರಸಿಂಹರಾಯರ ಆಡಳಿತದಲ್ಲಿ ಐದು ವರ್ಷ ಆರ್ಥಿಕ ಮಂತ್ರಿಯಾಗಿ ಕೆಲಸ ಮಾಡಿದ್ದರು. ಆ ಕಾಲದಲ್ಲಿ ಸುಧಾರೀಕರಣ, ಖಾಸಗೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತಂದು ಕೊಟ್ಟರು. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ದೇಶ ಮುಕ್ತವಾಯಿತು ಎಂಬುದನ್ನು ನಾವು ಸ್ಮರಿಸಬೇಕಾಗುತ್ತದೆ  ಎಂದರು.

ಇವೇಳೆ ಪುರಸಭೆ ಸದಸ್ಯರಾದ ಪೈಲ್ವಾನ್ ಗಣೇಶ, ಲಾಟಿ ದಾದಪೀರ್, ಗೊಂಗಡಿ ನಾಗರಾಜ, ಮುಖಂಡರಾದ ದಂಡಿನ ಹರೀಶ, ಟಿ.ಹೆಚ್.ಎಂ.ಮಂಜುನಾಥ, ಎಂ.ವಿ.ಕೃಷ್ಣಕಾಂತ, ಎಲ್.ಎಂ.ನಾಯ್ಕ, ಸಲಿಂ ಅಹಮದ್, ಗುಡಿ ನಾಗರಾಜ, ಪೈಲ್ವಾನ್ ಬಸಪ್ಪ ಸೇರಿದಂತೆ ಇತರರು ಇದ್ದರು.

error: Content is protected !!