ಜಗಳೂರು, ಡಿ. 26 – ಸಾಕ್ಷಾತ್ ದೈವಸ್ವರೂಪವಾಗಿರುವ ವಿಕಲಚೇತನರ ಬಗ್ಗೆ ತಾತ್ಸಾರ ಮಾಡಿದರೆ ಕ್ಷಮೆ ಇರದು. ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.
ಸೋಮವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರವಾಹನಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 2ಸಾವಿರಕ್ಕೂ ಅಧಿಕ ವಿಕಲಚೇತನರಿದ್ದು.ಸ್ವಾಭಿಮಾನದಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವುದು ಶ್ಲಾಘನೀಯ. ಪ್ರಸಕ್ತ ಸಾಲಿನಲ್ಲಿ 27 ತ್ರಿಚಕ್ರವಾಹನ ವಿತರಿಸುತ್ತಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಶೇ.5ರಷ್ಟು ಮೀಸಲು ಅನುದಾನದಲ್ಲಿ ವಿಕಲಚೇತನರ ಭವನ ನಿರ್ಮಿಸಲಾಗುವುದು ಎಂದರು.
ಕೋವಿಡ್ ಸಂದರ್ಭದಲ್ಲಿ ನಾನು ಯಾವುದೇ ಅಧಿಕಾರವಿಲ್ಲದ ವೇಳೆ ನಿರ್ಗತಿಕರಿಗೆ, ಶ್ರಮಿಕರಿಗೆ ಆಹಾರ ಕಿಟ್ ವಿತರಿಸಿ ಸಕಾಲದಲ್ಲಿ ಮಾನವೀಯತೆ ಮೆರೆದ ನೆಮ್ಮದಿ ನನಗಿದೆ ಎಂದು ಶಾಸಕರು ತಿಳಿಸಿದರು.
ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ತಾ.ಪಂ. ಇಓ ಕೆಂಚಪ್ಪ, ಪಿಡಬ್ಲೂಡಿ ಎಇಇ ನಾಗರಾಜ್, ಸಿಡಿಪಿಓ ಬೀರೇಂದ್ರಕುಮಾರ್, ಜಿ.ಪಂ. ಎಇಇ ಶಿವಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ್, ಮಹೇಶ್ವರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಲಿಂಗಸ್ವಾಮಿ, ವಿಕಲ ಚೇತನರ ಸಂಘದ ರಾಜ್ಯ ಅದ್ಯಕ್ಷ ಮಹಾಂತೇಶ್ ಬ್ರಹ್ಮ, ತಾಲೂಕು ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ಅಂಜಿ ನಪ್ಪ, ಮಹಾಂತೇಶ್, ಮುಖಂಡರಾದ ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರಿದ್ದರು.