ಹರಿಹರ, ಡಿ.25- ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಅನುಚಿತ ವಾಗಿ ವರ್ತಿಸಿ, ಅಮಾನುಷವಾಗಿ ನಡೆದುಕೊಂಡ ಕಹಿ ಘಟನೆ ಯಿಂದ ಸಮಾಜದ ಜನರಿಗೆ ನೋವು ತರಿಸಿದೆ ಎಂದು ಪಂಚಮಸಾಲಿ ಸಮಾಜದ ಗುರುಪೀಠಾಧ್ಯಕ್ಷರಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ ನಗರದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಸಮಯದಲ್ಲಿ ಪೊಲೀಸ್ ಲಾಠಿ ಚಾರ್ಜ್ ವೇಳೆ ನಗರದ ವಕೀಲರಾದ ರುದ್ರಗೌಡ್ರು ಪೆಟ್ಟು ತಿಂದ ಗಾಯಗೊಂಡಿದ್ದು, ಶ್ರೀಗಳು ಅವರ ಮನೆಗೆ ಭೇಟಿ ಕೊಟ್ಟು ಅವರಿಗೆ ಆತ್ಮಸ್ಥೈರ್ಯ ತುಂಬಿ ಮಾತನಾಡಿದರು.
ಸರ್ಕಾರದ ಮಾನದಂಡಗಳಿದ್ದರೂ ಸಹ ಅದನ್ನು ಪರಿಗಣಿಸದೇ ದಿಢೀರ್ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿ ಸಮಾಜದ ಜನರ ಸ್ವಾಭಿಮಾನದ ಹೋರಾಟಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಮುಂದಾಗಿದ್ದು ಖಂಡನಿಯ. ಅಂದಿನ ಘಟನೆ ಬಗ್ಗೆ ಇದುವರೆಗೂ ಸರ್ಕಾರ, ಸಮಾಜದ ಜನರಲ್ಲಿ ಕ್ಷಮಾಪಣೆ ಕೇಳಿಲ್ಲ, ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಸಮಾಜ ಗಮನಿಸಿದೆ ಎಂದು ಹೇಳಿದರು.
ಈ ಘಟನೆಯಿಂದ ಸಮಾಜದ ಯಾರೂ ದೃತಿಗೆಡುವ ಅವಶ್ಯಕತೆ ಇಲ್ಲ. ಘಟನೆ ಬಗ್ಗೆ ನೋವು ಆಗಿರಬಹುದು. ಆದರೆ ಪಂಚಮಸಾಲಿ ಸಮಾಜವು ದಿನದಿಂದ ದಿನಕ್ಕೆ ಇನ್ನಷ್ಟು ಗಟ್ಟಿಯಾಗುತ್ತಿದ್ದು, ಇದರಿಂದಾಗಿ ಸಂಘಟನೆಯ ಶಕ್ತಿ ಇಮ್ಮಡಿಯಾಗಿದೆ ಎಂದು ತಿಳಿಸಿದರು.
ವಕೀಲ ಪಿ. ರುದ್ರಗೌಡ್ರು ಮಾತನಾಡಿ, ಅಂದಿನ ಘಟನೆ ತಾತ್ಕಾಲಿಕವಾಗಿ ಮನಸ್ಸಿಗೆ ಘಾಸಿ ಆಯಿತು. ಆದರೆ ಗುರುಗಳು ಮನೆಗೆ ಆಗಮಿಸಿ ನಮಗೆ ಮತ್ತು ನಮ್ಮ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನಮಗೆ ಆತ್ಮಸ್ಥೈರ್ಯ ತಂಬಿದ್ದರಿಂದ ಸಮಾಜಕ್ಕಾಗಿ ನಾನು ಅಷ್ಟೇ ಅಲ್ಲದೆ ನನ್ನ ಸಹಪಾಠಿ ಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ವಂತೆ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ಮಾತನಾಡಿ, ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮಿಗಳು ಸಮಾಜದ ಕಿರೀಟ ಇದ್ದಂತೆ. ಹಿಂದೆ 2ಎ ಮೀಸಲಾತಿಗಾಗಿ 700 ಕಿಲೋಮೀಟರ್ ಪಾದಯಾತ್ರೆ ಮಾಡಿದರೂ ಸಹ ರಾಜ್ಯದಾದ್ಯಂತ ಒಂದು ಚಿಕ್ಕ ಘಟನೆಯಾಗದಂತೆ ಎಚ್ಚರಿಕೆಯಿಂದ ಹೋರಾಟ ಮಾಡಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಆಡಳಿತದ ವೇಳೆ ನಮಗೆ ಪರಿಗಣಿಸಲಿಲ್ಲ. ಈಗಿನ ಕಾಂಗ್ರೆಸ್ ಪಕ್ಷದ ಸರ್ಕಾರ ನಮ್ಮನ್ನು ಪರಿಗಣಿಸುತ್ತಿಲ್ಲ. ಆದರೆ, ನಮ್ಮ ಸಮಜದ ಮತಗಳು ಮಾತ್ರ ಅವರಿಗೆ ಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಜನರು ಇದರ ಬಗ್ಗೆ ಚರ್ಚೆ ಮಾಡಿ ಒಂದು ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಆಶೋಕ ಗೊಪನಾಳ, ವಕೀಲ ಬಸವರಾಜ್ ಓಂಕಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪಂಚಮಸಾಲಿ ಯುವ ಘಟಕದ ಕಾರ್ಯದರ್ಶಿ ದಾವಣಗೆರೆ ಬಕ್ಕೆಶ್, ವಕೀಲರಾದ ಬಸವರಾಜ್ ಹುಲಿಗಿನ ಹೊಳೆ, ನಾಗರಾಜ್ ಹಲವಾಗಲು, ರಮೇಶ್ ಜಿ.ಬಿ. ಪ್ರಕಾಶ್ ಬಿ.ಸಿ. ಗಣೇಶ ಬಿ.ಎಸ್. ಹನುಮಂತ ಗೌಡ ಎಂ.ಸಿ. ಪಿಎಸ್ಐ ವಿಜಯ ಕುಮಾರ್, ರವಿಕುಮಾರ್ ಇತರರು ಹಾಜರಿದ್ದರು.