ಹರಪನಹಳ್ಳಿ, ಡಿ. 25- ವಾಜಪೇಯಿ ಅವರು ಅಜಾತ ಶತ್ರು. ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಮತ್ತು ಇವರ ನಾಯಕತ್ವದಿಂದ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ. ಲಕ್ಷ್ಮಣ್ ಹೇಳಿದರು.
ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ, ಬಿಜೆಪಿ ಸಂಸ್ಥಾಪಕ ಅಟಲ್ ಬಿಹಾರಿ ವಾಜಪೇಯಿ ಅವರ 100 ವರ್ಷದ ಜನ್ಮದಿನಾಚರಣೆ ಸುಶಾಸನ ದಿನ ಎಂದು ಆಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ವತ್ರೆ ಸೇರಿದಂತೆ ವಿವಿಧ ಅಸ್ವತ್ರೆಗಳಿಗೆ ತೆರಳಿ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಅವರು ಮಾತನಾಡಿದರು.
ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಿ. ನಂಜನಗೌಡ ಮಾತನಾಡಿ, ವಾಜಪೇಯಿ ಈ ದೇಶ ಕಂಡ ಅಪರೂಪದ ರಾಜಕಾರಣಿ ಅವರು 5 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ಸೇತರ ಪೂರ್ಣಾವಧಿಯ ಅಧಿಕಾರ ಅನುಭವಿಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಉತ್ತಮ ಕವಿ, ವಾಗ್ಮಿ, ಸಾಹಿತಿ, ಶಾಂತಿ ಸುವ್ಯವಸ್ಥೆಯನ್ನು ಮೈಗೂಡಿಸಿಕೊಂಡು ರಾಷ್ಟ್ರ ರಾಜಕಾರಣದ ಉತ್ತಮ ಪಟು ಆಗಿದ್ದರು ಎಂದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಎ. ಉದಯಕುಮಾರ್ ಮಾತನಾಡಿ, ವಾಜಪೇಯಿ ಅವರು ಬಾಲ್ಯದಲ್ಲಿ ಶಾಲಾ ಶಿಕ್ಷಕರ ಮಗನಾಗಿ ಬಡ ಕುಟುಂಬದಲ್ಲಿ ಹುಟ್ಟಿ ಪ್ರಧಾನಿ ಹುದ್ದೆಗೆ ಏರಿದವರು. ಇವರು ತಂದೆಯವರ ಆಸೆಯಂತೆ ವಕೀಲ ವೃತ್ತಿ ಇಚ್ಛೆ ಇದ್ದರೂ ವಾಜಪೇಯಿ ಅವರು ಸಮಾಜ ಸೇವೆಯ ರಾಜಕಾರಣದ ವೃತ್ತಿಗೆ ಧುಮುಕಿ ವಿಶ್ವ ಮೆಚ್ಚುವ ನಾಯಕರಾಗಿದ್ದರು ಎಂದರು. ಪೋಕ್ರನ್ ಅಣ್ವಸ್ತ್ರ ಪ್ರಯೋಗ ಕಾರ್ಗಿಲ್ ಯುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಧಾನ ಮಂತ್ರಿ ಸಡಕ್ ಯೋಜನೆ ಸರ್ವ ಶಿಕ್ಷಣ ಅಭಿಯಾನ ಮುಂತಾದ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾದ ಸ್ವಪ್ನ ಮಲ್ಲಿಕಾರ್ಜುನ್, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವೆಹಳ್ಳಿ ಮಂಜುನಾಥ್, ಮಂಡಲದ ಉಪಾಧ್ಯಕ್ಷ ಮುದುಕವ್ವ ನವರ ಶಂಕರ್, ಸಹಕಾರ ಸಮಿತಿ ರಾಜ್ಯ ಸದಸ್ಯ ಜೆ. ಓಂಕರೇಶ್ವರ ಗೌಡ, ಪ್ರಧಾನ ಕಾರ್ಯದರ್ಶಿ ಬಿ.ವೈ. ವೆಂಕಟೇಶ್ ನಾಯ್ಕ, ಮುಖಂಡರಾದ ಕೆ. ಮಂಜುಳಾ, ಬದ್ರಿ ನಾರಾಯಣ್, ಮಲ್ಲಿಕಾರ್ಜುನ್, ಮಟ್ಟಿ ನಾಗಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.