ಸತ್ಯ, ಸೈದ್ಧಾಂತಿಕ ಚಿಂತನೆಗಳ ಕೊರತೆಯೇ ಕವಲುದಾರಿಗೆ ಕಾರಣೃ-ಕೇದಾರ ಭೀಮಾಶಂಕರಲಿಂಗ ಶ್ರೀಗಳು

ಸತ್ಯ, ಸೈದ್ಧಾಂತಿಕ ಚಿಂತನೆಗಳ ಕೊರತೆಯೇ ಕವಲುದಾರಿಗೆ ಕಾರಣೃ-ಕೇದಾರ ಭೀಮಾಶಂಕರಲಿಂಗ ಶ್ರೀಗಳು

ಹರಿಹರ,ಡಿ.23-  ಪರಂಪರೆಯನ್ನು ನಾವು ರಕ್ಷಣೆ ಮಾಡಿದರೆ, ನಮ್ಮನ್ನು ಪರಂಪರೆ ರಕ್ಷಣೆ ಮಾಡುತ್ತದೆ ಎಂದು ಹಿಮವತ್ಕೇದಾರ  ಜಗದ್ಗುರು ಶ್ರೀ ಭೀಮಾಶಂಕರಲಿಂಗ  ಶ್ರೀಗಳು ಹೇಳಿದರು.

ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ದಕ್ಷಿಣ ಕೇದಾರ ವೈರಾಗ್ಯಧಾಮದಲ್ಲಿ ನಡೆದ  ದಾಸೋಹ ಭವನ, ಭಕ್ತ ಭವನ, ಸಭಾ ಭವನಗಳ ಲೋಕಾರ್ಪಣೆ ಮತ್ತು ಇಷ್ಟಲಿಂಗ ಮಹಾಪೂಜಾ   ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 

ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಮಾನಸಿಕ ನೆಮ್ಮದಿ ಎನ್ನುವುದಿರುವುದಿಲ್ಲ, ಪೂಜೆಯಿಂದ ಮಾತ್ರ ಮನಸ್ಸಿಗೆ ಸಮಾಧಾನ ಸಿಗಲಿದೆ. ತನು, ಮನ ಮತ್ತು ಧನದಿಂದ ಪರಿಪೂರ್ಣವಾಗಿ ಮಾಡಿದ  ಸೇವೆ ಸಾರ್ಥಕವಾಗುತ್ತದೆ.  

ಇಂದು ಮನುಷ್ಯ ಭೌತಿಕವಾಗಿ ಸಾಕಷ್ಟು ಬೆಳೆದಿದ್ದರೂ ಅಪಾರ ಸಂಪತ್ತು ಸಂಪಾದಿಸಿದರೂ ಮಾನಸಿಕವಾಗಿ ಶಾಂತಿ, ಸಂತೃಪ್ತಿ ಮನೋಭಾವ ಇಲ್ಲದಂತಾಗುತ್ತಿದೆ. ಹಣ, ಅಧಿಕಾರದ ಬೆನ್ನು ಹತ್ತಿ ಹೋದ ಮನುಷ್ಯ ಧರ್ಮ, ಸಂಸ್ಕೃತಿಯ ಆಚರಣೆ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವುದು ನೋವಿನ ಸಂಗತಿ. 

ಧರ್ಮದ ಆದರ್ಶ ಸಿದ್ಧಾಂತ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯದೇ ಇದ್ದರೆ ಆತಂಕ ತಪ್ಪದು.  ಸತ್ಯ ಸೈದ್ಧಾಂತಿಕ ಚಿಂತನೆಗಳ ಕೊರತೆಯಿಂದಾಗಿ ಕೆಲವರು ಕವಲು ದಾರಿಯಲ್ಲಿ ಸಾಗುತ್ತಿದ್ದಾರೆ. ಧರ್ಮ ಪೀಠಗಳ ಮಾರ್ಗದರ್ಶನ ಇಂದು ಬಹಳಷ್ಟು ಅಗತ್ಯವಿದೆ ಎಂದರು. 

 ಇಲ್ಲಿರುವ ವೈರಾಗ್ಯ ಧಾಮ ಇದು ಭಕ್ತರ ಧಾಮವಾಗಲಿದೆ, ಇಲ್ಲಿ ಧರ್ಮ ಸಂಸ್ಕೃತಿಯ ಪುನರುತ್ಥಾನದ ಕಾರ್ಯಗಳು ನಿರಂತರ ನಡೆಯಲಿವೆ,  2025ರ ಡಿ.22ರೊಳಗೆ ಈ ಸ್ಥಳದಲ್ಲಿ ಕೇದಾರನಾಥನ ಚಿಕ್ಕ ಮಂದಿರವನ್ನು ನಿರ್ಮಾಣ ಮಾಡುವ ಮೂಲಕ  ಕೇದಾರನಾಥ ದರ್ಶನ ಮಾಡುವ ಸೌಭಾಗ್ಯ ಈ ಭಾಗದ ಭಕ್ತರಿಗೆ ಸಿಗುವಂತಾಗಲಿ ಎಂದು  ಆಶೀರ್ವದಿಸಿದರು..

ಕಣ್ವಕುಪ್ಪಿ ಹಿರೇಮಠದ ಡಾ.ನಾಲ್ವಡಿ ಶಾಂತಲಿಂಗ ಶ್ರೀಗಳು ಮಾತನಾಡಿ ಮನುಷ್ಯ ಜೀವನದಲ್ಲಿ ಧರ್ಮ, ತತ್ವ, ಸಿದ್ಧಾಂತ, ಪರಂಪರೆ ಜೊತೆ ಕೈಜೋಡಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಭಕ್ತರ ಸಂಪತ್ತು, ಹಣ, ಸುಖವನ್ನು ಪಡೆಯುವವನು ನಿಜವಾದ ಗುರುವಲ್ಲ, ಯಾರು ಭಕ್ತರ ದುಃಖ, ಪಾಪ, ಶಾಪ, ನೋವು, ಸಂಕಷ್ಟ, ಶಾರೀರಿಕ ದೌರ್ಬಲ್ಯಗಳಿಗೆ ಮುಕ್ತಿ ನೀಡುತ್ತಾರೋ ಅವರೇ ನಿಜವಾದ ಗುರುವಾಗಲು ಸಾಧ್ಯ. ಇದಕ್ಕೆ ಹಿಮತ್ಕೇದಾರ ಭೀಮಾಶಂಕರಲಿಂಗ ಶ್ರೀಗಳೇ ಸಾಕ್ಷಿ ಎಂದರು.

ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು, ಸಮಾರಂಭಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

error: Content is protected !!