ದಾವಣಗೆರೆ, ಡಿ.23- ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು ಹಾಗೂ ನಕಲಿ ಸುದ್ದಿಗಳು ಹೆಚ್ಚಿನ ರೀತಿಯಲ್ಲಿ ಹರಿದಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ `Public Eye ‘ ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ.
ಈ ವಾಟ್ಸಾಪ್ ಗ್ರೂಪ್ ಕ್ಯೂಆರ್ ಕೋಡ್ ಅನ್ನು ಉಪ ಪೊಲೀಸ್ ಮಹಾ ನಿರೀಕ್ಷಕ ಬಿ. ರಮೇಶ್ ಸೋಮವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಪರಿವೀಕ್ಷಣಾ ಕವಾಯತು ಸಮಯದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ ಉಪಸ್ಥಿತರಿದ್ದರು.
ವಾಟ್ಸಾಪ್ ಗ್ರೂಪ್ ನಂಬರ್ 9480803208 ಆಗಿದ್ದು, ಸಾರ್ವಜನಿಕರು ಈ ಮೊಬೈಲ್ ನಂಬರಿಗೆ ತಮ್ಮ ಸ್ಥಳೀಯ ಮಟ್ಟದಲ್ಲಿ ನಡೆಯುವ ಕಾನೂನು ಉಲ್ಲಂಘನೆ ಹಾಗೂ ಕಾನೂನು ಬಾಹಿರ ಕೃತ್ಯಗಳಿಗೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನುಮಾನಾಸ್ಪದ ಸುದ್ದಿ, ಆಡಿಯೋ, ವಿಡಿಯೋ ಮತ್ತು ಪೋಟೋಗಳನ್ನು ದಾವಣಗೆರೆ ಜಿಲ್ಲಾ ಪೊಲೀಸರೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಸಾಮಾಜಿಕ ಜಾಲತಾಣಗಳಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಕಾಪಾಡುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.