ಜಗಳೂರಿನ ರಾಜ್ಯೋತ್ಸವದಲ್ಲಿ ರೂಪೇಶ್ ರಾಜಣ್ಣ ಅಭಿಮತ
ಜಗಳೂರು,ನ.10- ಕನ್ನಡ ಭಾಷೆಯ ಅಸ್ತಿತ್ವ, ಅಸ್ಮಿತೆ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರ ಅವರಣದಲ್ಲಿ ಯುವ ಕರ್ನಾಟಕ ವೇದಿಕೆ ತಾಲೂಕು ಘಟಕದ ಪದಗ್ರಹಣ, ಕನ್ನಡ ರಾಜ್ಯೋತ್ಸವ ಮತ್ತು ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯಕ್ಕೆ ಕನ್ನಡ ಭಾಷೆಯೇ ಸಾರ್ವಭೌಮವಾಗಿದ್ದು. ಯುವ ಕರ್ನಾಟಕ ವೇದಿಕೆ ಕುವೆಂಪು, ಬುದ್ದ, ಬಸವ, ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಜಾತ್ಯಾತೀತ ವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕರ್ನಾಟಕದ ಉದ್ದಗಲಕ್ಕೂ ವಿಸ್ತರಣೆಗೊಂಡು ಬಲಿಷ್ಠ ಸಂಘಟನೆಯಾಗಿ ಹೊರ ಹೊಮ್ಮುತ್ತಿದೆ ಎಂದರು.
ದ್ವೇಷದಿಂದ ಸಾಧನೆ ಅಸಾಧ್ಯ. ಸ್ನೇಹದಿಂದ ಕನ್ನಡಿಗರ ಮನಗೆದ್ದು ಕನ್ನಡ ನಾಡು, ನು,ಡಿ ನೆಲ, ಜಲ ಸಂರಕ್ಷಣೆಗೆ ಧಕ್ಕೆ ಉಂಟಾದರೆ ಪ್ರಾಣ ತ್ಯಾಗಕ್ಕೂ ಸಿದ್ದರಾಗೋಣ. ರೈತ, ಮಹಿಳೆ, ಕಾರ್ಮಿಕರ ಧ್ವನಿಯಾಗಿ ಹೊರಾಟ ರೂಪಿಸಲು ಸರ್ವರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡಾಟಿಕೆ ವಿರುದ್ಧ ಯುವ ಕರ್ನಾಟಕ ವೇದಿಕೆ ಮುಂಚೂಣಿ ನಾಯಕತ್ವ ವಹಿಸಿತ್ತು. ಬೆಂಗಳೂರಿ ನಲ್ಲಿ ಹೊರ ರಾಜ್ಯಗಳ ದಬ್ಬಾಳಿಕೆ ಖಂಡಿಸಿ, ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಲು ನಿರಂತರ ಹೊರಾಟ ನಡೆಸುತ್ತಿದೆ. ಸಂಘಟನಾ ಕಾರರು ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯ ಕದಡುವವರನ್ನು ತಿರಸ್ಕರಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ನಟ, ನಿರ್ದೇಶಕ ಪಿ. ಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯ ವಲಸಿಗರಿಗೆ ಉದ್ಯೋಗದ ಆಶ್ರಯ ತಾಣವಾಗಿದೆ. ಉದ್ಯೋಗ ಹರಸಿ ಬಂದವರು ಕರ್ನಾಟಕದಲ್ಲಿ ತಮ್ಮ ಮಾತೃ ನಾಡಿನ ಭಾಷಾ ಪ್ರಭುತ್ವ ಹಿಡಿತ ಸಾಧಿಸಲು ಹೊರಟಿರುವುದು ಕನ್ನಡ ನಾಡಿನಲ್ಲಿ ಆತಂಕಕಾರಿ ಬೆಳವಣಿಗೆ. ಸಂವಿಧಾನಬದ್ದ ಹಕ್ಕು, ಮೀಸಲಾತಿ ಅನುಭವಿಸುತ್ತಿರುವವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಕನ್ನಡ ನಾಡು, ನುಡಿಯ ಸೇವೆ, ಸಾಮಾಜಿಕ ಕಳಕಳಿ, ಸಂಘಟನೆ ಚತುರತೆ ಮೈಗೂಡಿಸಿಕೊಂಡಿ ರುವ ಬರ್ಕತ್ ಅಲಿ ಅವರು ಯುವ ಸಮೂಹಕ್ಕೆ ಆದರ್ಶವಾಗಿದೆ. ನಿರಾಶ್ರಿತ ವಯೋವೃದ್ಧರಿಗೆ ಲಾಲಾನೆ, ಪಾಲನೆ ಮಾಡುತ್ತಿರುವ ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ರಾಜ್ಯಕ್ಕೆ ಮಾದರಿ ಎಂದರು.
ಶೈನಿಂಗ್ ಸ್ಟಾರ್ ಕಲಾತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ಕೆ.ಪಿ. ಪಾಲಯ್ಯ, ಚಲಚಿತ್ರನಟ ಸುನಾಮಿ ಕಿಟ್ಟಿ, ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಯ್ಯದ್ ಶಫಿ, ತಾಲೂಕು ಗೌರವ ಅಧ್ಯಕ್ಷ ಬರ್ಕತ್ ಅಲಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಉಪಾಧ್ಯಕ್ಷ ನಾಗರಾಜ್ ಮರೇನಹಳ್ಳಿ, ಸಂಚಾಲಕ ಚಿಕ್ಕಮ್ಮನಹಟ್ಟಿ ಶ್ರೀಕಾಂತ್, ನರಸಿಂಹಮೂರ್ತಿ, ಕಾನೂನು ಸಲಹೆಗಾರ ಟಿ.ಬಸವರಾಜ್, ವಕೀಲ ತಿಪ್ಪೇಸ್ವಾಮಿ, ಬಿ.ಮಹೇಶ್ವರಪ್ಪ, ಜೈಭಾರತ್ ಟ್ರಸ್ಟ್ ನ ನಬೀಉಲ್ಲಾ, ಜನಸ್ನೇಹಿ ಟ್ರಸ್ಟ್ ನ ಯೋಗೇಶ್, ಮಹೇಶ್ ಸೇರಿದಂತೆ ಪ.ಪಂ.ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.