ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಗಡಿಗುಡಾಳ್ ಮಂಜುನಾಥ್
ದಾವಣಗೆರೆ, ನ.10- ನಗರದ ಎಂಸಿಸಿ `ಬಿ’ ಬ್ಲಾಕ್ನಲ್ಲಿ ನಾಗರಿಕರು, ವಾರ್ಡ್ನ ಪ್ರಮುಖರು ಸೇರಿ ಮಹಾನಗರಪಾಲಿಕೆಯ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕನ್ನಡ ದಿನಾಚರಣೆಯನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್, ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಶ್ರಮಿಸಿದವರನ್ನು ನೆನಪು ಮಾಡಿಕೊಳ್ಳುವ ಮೂಲಕ ಮಹನೀಯರಿಗೆ ಗೌರವ ಸಲ್ಲಿಸುವ ಕೆಲಸ ಮಾಡೋಣ. ಅವರ ಆಶಯಗಳಂತೆ ಕನ್ನಡ ಉಳಿಸಿ ಬೆಳೆಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡ ನಾಡು-ನುಡಿ, ಇತಿಹಾಸಕ್ಕೆ ತನ್ನದೇ ಆದ ವಿಶಿಷ್ಟ, ಮಹತ್ವ, ಪ್ರಾಮುಖ್ಯತೆ ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ಶ್ರೇಷ್ಠ. ಕನ್ನಡ ನುಡಿಯೇ ಚೆಂದ. ಕನ್ನಡ ಸಂಸ್ಕೃತಿ ಪರಂ ಪರೆಯೇ ಅಂದ. ಇಂಥ ಮಹೋನ್ನತ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಕನ್ನಡ ಆಡಳಿತ ಭಾಷೆಯಾಗಿದ್ದರೂ ಪರಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಭಾಷೆಯ ಮೇಲೆ ಎಲ್ಲರೂ ಅಭಿಮಾನ ಬೆಳೆಸಬೇಕು. ಮಾತೃಭಾಷೆಯನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮಗಷ್ಟೇ ಅಲ್ಲ ಮಕ್ಕಳಿಗೂ ಕಲಿಸಿಕೊಡಬೇಕಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನೇರಿ ಹೊರಟಿರುವವರಿಗೆ ಕನ್ನಡ ಭಾಷೆಯ ಬಗ್ಗೆ ತಿಳಿಸಿಕೊಡೋಣ ಎಂದು ಕರೆ ನೀಡಿದರು.
ನಗರದಲ್ಲಿ ಕನ್ನಡ ಭಾಷೆ ಸೇರಿದಂತೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡವರು ಇದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಜೊತೆಗೆ ಮಹನೀಯರ ಕಾರ್ಯ ತಿಳಿಸಿಕೊಡುವ ಕೆಲಸ ಮಾಡೋಣ ಎಂದು ಹೇಳಿದರು.