ಹರಪನಹಳ್ಳಿ, ಅ. 24 – ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕಿನ ಅರಸೀಕೆರೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ವಿದ್ಯಾರ್ಥಿ, ಯುವಜನ, ರೈತ, ದಲಿತ ಸಂಘಟನೆಗಳ ಮುಖಂಡರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಈ ವೇಳೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ದೊಡ್ಡ ಹೋಬಳಿಯಾಗಿದ್ದು ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ ರೈತರು, ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿ ವಾಸವಾಗಿದ್ದಾರೆ, ಆದರೆ ಮೂಲಭೂತ ಸಮಸ್ಯೆಗಳು ಮಾತ್ರ ಇನ್ನು ಜೀವಂತವಾಗಿವೆ ಎಂದು ದೂರಿದರು.
ಇಲ್ಲಿ ಸರಿಯಾದ ರಸ್ತೆ, ಚರಂಡಿ, ಬಸ್ ನಿಲ್ದಾಣ, ವಿದ್ಯುತ್, ಸಾರಿಗೆ, ವಸತಿ, ವೈದ್ಯರ ಕೊರತೆಯಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಎಸ್.ಎಂ. ಸಂತೋಷ ಮಾತನಾಡಿ, ಅರಸೀಕೆರೆ ಹೋಬಳಿ ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿ ನಿಲಯ ಇಲ್ಲದೇ ಪರದಾಡುವ ಪರಿಸ್ಥಿತಿ ಇದೆ, ಹೋಬಳಿ ಕೇಂದ್ರದಲ್ಲಿ ನಾಡಕಚೇರಿ ಇದ್ದು ಕಟ್ಟಡ ಶಿಥಿಲಗೊಂಡಿದೆ. ಸರಿಯಾದ ಕಟ್ಟಡವಿಲ್ಲದೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.
ಬೇಡಿಕೆಗಳು : ಹರಪನಹಳ್ಳಿಯಿಂದ ಅರಸಿಕೆರೆ ಮಾರ್ಗವಾಗಿ ಉಚ್ಚಂಗಿದುರ್ಗಕ್ಕೆ ಹೋಗುವ ರಸ್ತೆ, ಕೆರೆಗುಡಿಹಳ್ಳಿಯಿಂದ ಕಬ್ಬಳ್ಳಿ, ಬೂದಿಹಾಳು, ಗಡಿಗು ಡಾಳ್, ಮಾದಿಹಳ್ಳಿ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿದ್ದು ಕೂಡಲೇ ರಸ್ತೆ ನಿರ್ಮಾಣ ಮಾಡಬೇಕು.
ಅರಸಿಕೆರೆ ಬಸ್ ನಿಲ್ದಾಣ ಕಾಮಗಾರಿ ಅಪೂರ್ಣ ಗೊಂಡಿದ್ದು, ಕೂಡಲೇ ಪೂರ್ಣಗೊಳಿಸಬೇಕು, ಅರಸಿಕೆರೆ ಯಿಂದ ಹರಪನಹಳ್ಳಿ, ವಿಜಯನಗರ ಸೇರಿದಂತೆ ವಿವಿಧ ನಗರಗಳಿಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು.
ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಜಗಳೂರು ವಿಧಾನಸಭಾ ಕ್ಷೇತ್ರದ 7 ಗ್ರಾಮ ಪಂಚಾಯಿತಿ ಗ್ರಾಮಗಳಿಗೆ ಆಶ್ರಯ ಮನೆಗಳನ್ನು ಶಾಸಕರು ಮಂಜೂರು ಮಾಡಿಸಬೇಕು.
ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯುತ್ ಶಕ್ತಿ ಘಟಕ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರ ಪ್ರಾರಂಭಿಸಿ ರೈತರಿಗೆ ವಿದ್ಯುತ್ ಸಮಸ್ಯೆಯನ್ನು ನೀಗಿಸಬೇಕು.
ಅರಸಿಕೆರೆ ಹೋಬಳಿಯಲ್ಲಿ ಹೆಚ್ಚು ಮಳೆಯಿಂದ ಬೆಳೆಗಳು ನಾಶವಾಗಿದ್ದು, ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಬಳಿಕ ಉಪತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಬಿಸಿಎಂ, ಆರೋಗ್ಯ, ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಬೂದಿಹಾಳ್ ಸಿದ್ದಪ್ಪ, ಕಬ್ಬಳ್ಳಿ ಮೈಲಪ್ಪ, ಬಳಿಗಾನೂರು ಕೊಟ್ರೇಶ್, ಡಿ. ನಾಗಪ್ಪ, ಹನುಮಂತಪ್ಪ, ಬಸವರಾಜ, ಅರುಣ, ಸತ್ತೂರು ಮಹಾದೇವಪ್ಪ, ಶಿವರಾಮ, ಪುಣಬಗಟ್ಟಿ ಮಂಜುನಾಥ, ಮಾರುತಿ, ಪಕ್ಕೀರಪ್ಪ, ರಮೇಶ್, ಎಂ. ಬಸವರಾಜ, ಕಬ್ಬಳ್ಳಿ ರಮೇಶ್, ಪ್ರಭು, ಕಾಳೇಶ್, ಕಾಶಿ, ಗುರು, ಇರ್ಫಾನ್, ಮಂಜುನಾಥ ಸೇರಿದಂತೆ ಇತರರು ಇದ್ದರು.