ಮಲೇಬೆನ್ನೂರು – ಜಿಗಳಿ ರಸ್ತೆ ಪೂರ್ಣಗೊಳಿಸಲು ಸಂಸದರ ಸೂಚನೆ

ಮಲೇಬೆನ್ನೂರು – ಜಿಗಳಿ ರಸ್ತೆ ಪೂರ್ಣಗೊಳಿಸಲು ಸಂಸದರ ಸೂಚನೆ

ಮಲೇಬೆನ್ನೂರು, ಅ.24- ಅಪೂರ್ಣ ಗೊಂಡಿರುವ ಮಲೇಬೆನ್ನೂರು – ಜಿಗಳಿ ರಸ್ತೆ ಪೂರ್ಣಗೊಳಿಸಲು ತಕ್ಷಣ ಅಗತ್ಯ ಕ್ರಮ  ಕೈಗೊಳ್ಳುವಂತೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಲೊಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಜಿಗಳಿ ಗ್ರಾಮಸ್ಥರು ಸಂಸದರನ್ನು ಅವರ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಮಲೇಬೆನ್ನೂರಿನಿಂದ ಜಿಗಳಿ ಸಂಪರ್ಕಿಸುವ ಸುಮಾರು 3 ಕಿ.ಮೀ. ರಸ್ತೆಯ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಟೆಂಡರ್‌ ಆಗಿತ್ತು.

ಟೆಂಡರ್‌ ಆಗಿರುವ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿ, ಅರ್ಧ ಕೆಲಸ ಮಾಡಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಪ್ರಯೋಜನ ಆಗಿಲ್ಲ.

ಎಸ್‌. ರಾಮಪ್ಪ ಅವರು ಶಾಸಕರಿದ್ದಾಗ ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು. ಕೆಲಸ ಆರಂಭಿಸಿ 3 ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಜಿಲ್ಲಾ ಮುಖ್ಯ ರಸ್ತೆಯಾಗಿರುವ ಈ ರಸ್ತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈಗ ಆಗಿರುವ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ ಎಂಬುದನ್ನು ಗ್ರಾಮಸ್ಥರು ಸಂಸದರಿಗೆ ವಿವರಿಸಿದರು.

ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಸಂಸದರು, ಕೆಲಸ ಅರ್ಧ ಮಾಡಿ ಹೋಗಿರುವ ಗುತ್ತಿಗೆದಾರರನ್ನು ಹುಡುಕಿ ತರುವಂತೆ ಎಸ್ಪಿಗೆ ದೂರು ಕೊಡಿ ಅಥವಾ ಪುನಃ ಟೆಂಡರ್‌ ಕರೆದು ಕಾಮಗಾರಿ ಪೂರ್ಣಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ರೈತರನ್ನು ಒಕ್ಕಲೆಬ್ಬಿಸಬೇಡಿ: ಜಿಗಳಿ ಗ್ರಾಮದಲ್ಲಿ 40 ವರ್ಷಗಳ ಹಿಂದೆ ಸರ್ಕಾರದಿಂದಲೇ ಕಾನೂನು ಪ್ರಕಾರ ಹಂಚಿಕೆ ಮಾಡಿರುವ 44 ಜನರ ಜಮೀನುಗಳನ್ನು ವಾಪಸ್‌ ಪಡೆಯುವ ಕುರಿತು ದಿಢೀರ್‌ ನೋಟೀಸ್‌ ನೀಡಿರುವ ಕ್ರಮ ಸರಿ ಇಲ್ಲ ಎಂದು ಪ್ರಭಾ ಅವರು ಉಪವಿಭಾಗಾಧಿಕಾರಿಗಳಿಗೆ ಹೇಳಿದರು.

44 ಬಡ ರೈತರು ಸರ್ಕಾರ ನೀಡಿರುವ ಆ ಅರ್ಧ ಎಕರೆ ಜಮೀನಿನಲ್ಲೇ ಜೀವನ ನಡೆಸುತ್ತಿದ್ದಾರೆ. ನೀವು ಈಗ ಏಕಾಏಕಿ ಸರ್ವೇ ಮಾಡಿಸಿ, ಅಲ್ಲಿ ಕೆರೆ ಇತ್ತು, ಹಾಗಾಗಿ ಆ ಕೆರೆ ಜಮೀನುಗಳನ್ನು ವಾಪಸ್‌ ಪಡೆಯುತ್ತೇವೆ ಎನ್ನುವ ನಿಮ್ಮ ಈ ಉದ್ದೇಶ ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಸಂಸದರು ಪ್ರಶ್ನಿಸಿದರು.

ಈ ವಿಷಯದ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಮಾತನಾಡುತ್ತೇವೆ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದರು.

ಜಿಗಳಿ ಗ್ರಾಮದ ಇಂದೂಧರ್‌ ಎನ್‌. ರುದ್ರೇಗೌಡ, ಜಿ. ಆನಂದಪ್ಪ, ಬಿ.ಎಂ. ದೇವೇಂದ್ರಪ್ಪ, ಜಿ.ಆರ್‌. ನಾಗರಾಜ್‌, ಡಿ.ರವೀಂದ್ರಪ್ಪ, ಪತ್ರಕರ್ತ ಪ್ರಕಾಶ್‌ ಸೇರಿದಂತೆ 44 ರೈತರು ಈ ವೇಳೆ ಹಾಜರಿದ್ದರು.

error: Content is protected !!