ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

ದಾವಣಗೆರೆ ಜ.17-  ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಜಿಲ್ಲಾಡಳಿತ ದಿಂದ   ಇದೇ ದಿನಾಂಕ 26 ರಂದು  74 ನೇ ಗಣ ರಾಜ್ಯೋತ್ಸವವನ್ನು ಅರ್ಥಪೂರ್ಣ ಆಚರಣೆಗೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚನೆ ನೀಡಿದರು.

ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು,  ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನೆಯುವ ದಿನ ಇದಾಗಿದೆ. ಅವರ ಶ್ರಮ, ತ್ಯಾಗ, ಬಲಿದಾನಗಳಿಗೆ ನಾವು ಆದರ ಪೂರ್ವಕವಾಗಿ ಗೌರವ ಸಮರ್ಪಿಸೋಣ ಎಂದರು.

ಜನವರಿ 26 ರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ನಿಯಮಾನುಸಾರ ಧ್ವಜಾರೋಹಣ ನೆರೆವೇರಿಸಿ ಬೆಳಿಗ್ಗೆ 8.30 ರೊಳಗಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಸಮಾರಂಭದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಪಾಲ್ಗೊಳ್ಳಬೇಕು.  ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಸಮಾರಂಭದಲ್ಲಿ ಹಾಜರಿರಬೇಕು.  

ಪಥ ಸಂಚಲನದಲ್ಲಿ ಶಾಲಾ ಮಕ್ಕಳು, ಪೊಲೀಸ್, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಜೊತೆಗೆ ಗೃಹರಕ್ಷಕ ದಳದ ತಂಡಗಳೂ ಪಾಲ್ಗೊಳ್ಳಲಿವೆ.  ಕಾರ್ಯಕ್ರಮದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಮತ್ತು ಪರೇಡ್‍ನಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಒದಗಿಸಬೇಕು ಎಂದು ಸೂಚಿಸಿದರು.

ಪ್ಲಾಸ್ಟಿಕ್ ನಿಷೇಧ :  ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ಮತ್ತು ಪ್ಲಾಸ್ಟಿಕ್ ಹೂಗುಚ್ಚಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಇಡೀ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರರು, ಪೊಲೀಸ್ ಉಪ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು ನೋಡಿಕೊಂಡು ಕಾರ್ಯಕ್ರಮ ಅರ್ಥಪೂರ್ಣ ಗೊಳಿಸಲು ಸಹಕರಿಸಬೇಕು ಎಂದರು.

ದೀಪಾಲಂಕಾರ :     ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಿಗೆ, ಪ್ರಮುಖ ವೃತ್ತಗಳಿಗೆ ಸಂಬಂಧಪಟ್ಟ ಇಲಾಖೆಗಳು ದೀಪಾಲಂಕಾರ ಮಾಡಿಸಬೇಕು. ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಧ್ವಜ ಸಂಹಿತೆ ಕಾಪಾಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಲ್ಲಾ ಶಾಲೆಗಳಲ್ಲಿ 7.30 ಕ್ಕೆ ಧ್ವಜಾರೋಹಣ ನೆರವೇರಿಸಬೇಕು ಎಂದರು.

ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಎಂದು ಕರೆ ನೀಡಿದ ಅವರು, ಅಂದಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಡಿಡಿಪಿಐ ತಿಪ್ಪೇಶಪ್ಪ, ಮಹಾನಗರ ಪಾಲಿಕೆ ಆಯುಕ್ತ ರೇಣುಕಾ, ಡಿಹೆಚ್‍ಓ ಡಾ.ನಟರಾಜ, ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕಿ ನಜ್ಮಾ. ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!