ಜಗಳೂರಿನಲ್ಲಿ ಇಂದಿನಿಂದ ಹೊನಲು ಬೆಳಕಿನ ಕಬಡ್ಡಿ

ಜಗಳೂರಿನಲ್ಲಿ ಇಂದಿನಿಂದ ಹೊನಲು ಬೆಳಕಿನ ಕಬಡ್ಡಿ

ಜಗಳೂರು, 15- ಶಾಸಕ ಎಸ್.ವಿ.ರಾಮಚಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಎಸ್.ವಿ.ಆರ್ ಅಭಿಮಾನಿ ಬಳಗ ಹಾಗೂ  ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ `ಸಂಸದ ಜಿ.ಎಂ. ಸಿದ್ದೇಶ್ವರ್ ಕಪ್’
ಹೆಸರಿನಡಿ ನಾಳೆ ದಿನಾಂಕ 16, 17, 18ರಂದು ಮೂರು ದಿನಗಳ ಕಾಲ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದ್ದಾರೆ.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಕಬಡ್ಡಿ ಕ್ರೀಡಾಂಗಣ ಸಿದ್ಧತೆ ವೀಕ್ಷಿಸಿ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ 28 ಜಿಲ್ಲೆಗಳಿಂದ 30 ಪುರುಷ ಹಾಗೂ 24 ಮಹಿಳಾ ತಂಡಗಳು ಭಾಗವಹಿಸಲಿದ್ದು, 800 ಕ್ರೀಡಾಪಟುಗಳಿಗೆ  ಸಾರಿಗೆ ವೆಚ್ಚ, ಸಮವಸ್ತ್ರ, ನೀಡಲಾಗುವುದು, ಪಟ್ಟಣದ ಹಾಸ್ಟೆಲ್, ಕಲ್ಯಾಣ ಮಂಟಪಗಳಲ್ಲಿ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. 5 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಬಡ್ಡಿ ಅಸೋಸಿಯೇಷನ್‌ನ ಲಕ್ಷ್ಮಣ ಮಾತನಾಡಿ, ಕರ್ನಾಟಕ ಚಾಂಪಿಯನ್ ಶಿಪ್ ನಡೆಸಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 9 ರಿಂದ ರಾತ್ರಿ 11 ಗಂಟೆವರೆಗೆ  16 ಪಂದ್ಯಗಳು ನಡೆಯಲಿವೆ. ಲೀಗ್ ಕಮ್ ನಾಕ್‌ಔಟ್ ಪಂದ್ಯಗಳಾಗಿರುತ್ತವೆ. ಪ್ರಥಮ ಸ್ಥಾನಕ್ಕೆ ರೂ. 1,50,000, ದ್ವಿತೀಯ ರೂ. 1,00,000, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳಿಗೆ ತಲಾ ರೂ. 50,000 ನಗದು ಬಹುಮಾನ ಹಾಗು ಪ್ರಶಸ್ತಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಬಡ್ಡಿ ಪಂದ್ಯಾವಳಿಗೆ ಪ್ರೋ ಕಬಡ್ಡಿ ಸುಖೇಶ್ ಹೆಗ್ಡೆ, ಬೆಂಗಳೂರು ಬುಲ್ಸ್, ಪ್ರಕಾಶ್ ರೈ, ತುಮಕೂರು ಧನರಾಜ್, ಡಿ.ಸಿ. ರಮೇಶ್ ರಾಕೇಶ್, ಮಲ್ಲಿ, ಹನುಮಂತೇಗೌಡ್ರು, ರಾಜ್ಯ ಮಟ್ಟದ ಕಬಡ್ಡಿ ಆಟಗಾರರು ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ ಮಾತನಾಡಿ,  ಬಯಲು ರಂಗಮಂದಿರದ ಆವರಣದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ಹುಟ್ಟುಹಬ್ಬವನ್ನು ಅಭಿಮಾನಿ ಬಳಗದಿಂದ ಆಚರಿಸಲಾಗುವುದು. ಅಭಿಮಾನಿ ಬಳಗದಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಬೆಳಿಗ್ಗೆ 11
ಗಂಟೆಗೆ ಗಂಧರ್ವ ಇವೆಂಟ್ಸ್‌ನಿಂದ ರಸಮಂಜರಿ,
ನಂತರ ಸಂಜೆ 4 ಗಂಟೆಗೆ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ಮಾತನಾಡಿ, ಕ್ರೀಡಾಂಗಣ ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ಭದ್ರತೆಗಾಗಿ ಹೊರಗಡೆಯಿಂದ 60 ಜನ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ, ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಕಿರಣ್ ಕುಮಾರ್, ವಕೀಲ ಡಿ.ಶ್ರೀನಿವಾಸ್, ಪ.ಪಂ ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಭಾನ್, ಮುಖಂಡ ರಾದ ಹನುಮಂತಪ್ಪ, ಓಬಳೇಶ್, ಮಂಜುನಾಥ್, ಅಣಜಿಗೆರೆ, ಟಿ.ಮಲ್ಲಿಕಾರ್ಜುನ್, ಬಾಲೇನಹಳ್ಳಿ ಕೆಂಚನಗೌಡ, ಪ.ಪಂ ಸದಸ್ಯ ದೇವರಾಜ್, ನಾಗರಾಜ್, ಬಡಪ್ಪ ಸೇರಿದಂತೆ ಇದ್ದರು.

error: Content is protected !!