ತೃಪ್ತಿ ಕಲಿಯದೇ ಶಾಂತಿ ಇಲ್ಲ

ಸಿದ್ದಗಂಗಾ ಶಾಲೆಯ ವಾರ್ಷಿಕ ಸಂಭ್ರಮದಲ್ಲಿ ಸಂತೋಷ್ ಹೆಗಡೆ

ದಾವಣಗೆರೆ, ಜ. 15 – ಆಟಂ ಬಾಂಬ್ ಮಾಡುವುದು ಹೇಗೆ ಎಂಬುದನ್ನು ಕಲಿಸಿ ಕೊಡುತ್ತಿರುವ ಶಿಕ್ಷಣ, ಆಟಂ ಬಾಂಬ್ ಬಳಕೆಯ  ಬಗ್ಗೆ ಎಚ್ಚರಿಕೆ ವಹಿಸುವ ಕುರಿತ ನೈತಿಕತೆಯನ್ನು ಕಲಿಸುತ್ತಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್. ಸಂತೋಷ್ ಹೆಗಡೆ ವಿಷಾದಿಸಿದ್ದಾರೆ.

ನಗರದ ಸಿದ್ದಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜು, ಸಿದ್ದಗಂಗಾ ಕಾಂಪೋಜಿಟ್ ಹೈಸ್ಕೂಲ್, ಸಿದ್ದಗಂಗಾ ಸ್ಕೂಲ್ ಹಾಗೂ ಎಂ.ಎಸ್.ಎಸ್. ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 53ನೇ ವಾರ್ಷಿಕ ಸಂಭ್ರಮ – 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಗೆ ಭೌತಿಕ ಶ್ರೀಮಂತಿಕೆಗಿಂತ ಮೌಲ್ಯಗಳ ಶಿಕ್ಷಣ ಬೇಕಿದೆ. ನೈತಿಕ ತಳಹದಿ ಬೇಕಿದೆ. ಸಂತೃಪ್ತಿ ಹಾಗೂ ಮಾನವೀಯತೆ  ಬೇಕಿವೆ. ಆದರೆ, ಸಮಾಜ ಆ ಮೌಲ್ಯಗಳನ್ನು ಕಲಿಸುತ್ತಿಲ್ಲ ಎಂದವರು ಹೇಳಿದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳು ಹಾಗೂ ಖಾಸಗಿ ವಲಯ ಸೇರಿದಂತೆ ಎಲ್ಲೆಡೆ ಭ್ರಷ್ಟಾಚಾರ ಹರಡಿದೆ. ಸಮಾಜದ ಎಲ್ಲರಲ್ಲೂ ಇಂದು ಸ್ವಾರ್ಥ ಹಾಗೂ ದುರಾಸೆ ಮನೋಭಾವ ಕಾಣುತ್ತಿದೆ ಎಂದು ಹೆಗಡೆ ವಿಷಾದಿಸಿದರು.

ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದವರನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದೇವೆ. ಆ ಮೂಲಕ ಶ್ರೀಮಂತನಾಗಲು ಹಾಗೂ ಅಧಿಕಾರ ಪಡೆಯಲು ಜೈಲಿಗೆ ಹೋದರೂ ಸರಿ ಎಂಬ ಸಂದೇಶವನ್ನು ಮಕ್ಕಳಿಗೆ ನೀಡುತ್ತಿದ್ದೇವೆ ಎಂದವರು ವಿಷಾದಿಸಿದರು.

ಸಮಾಜದ ಈ ಧೋರಣೆಯಿಂದ ಶಾಂತಿ ಹಾಗೂ ಸಮಾಧಾನಗಳು ಮರೆಯಾಗುತ್ತಿವೆ. ಮೌಲ್ಯ ಹಾಗೂ ಮಾನವೀಯತೆಗಳಿಲ್ಲದ ಸಮಾಜದಲ್ಲಿ ಸೌಹಾರ್ದತೆ ಸಾಧ್ಯವಿಲ್ಲ ಎಂದವರು ಹೇಳಿದರು.

ಮಕ್ಕಳಿಗೆ ತೃಪ್ತಿ ಹಾಗೂ ಮಾನವೀಯತೆ ಗುಣಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಶಾಂತಿಯುತ ಬದಲಾವಣೆ ಬರಬೇಕಿದೆ ಎಂದವರು ಹೇಳಿದರು.

ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಸಿದ್ದಗಂಗಾ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಸಿ. ನಿರಂಜನ್, ಶೈಕ್ಷಣಿಕ ಮುಖ್ಯಸ್ಥ ಎಲ್.ವಿ. ಸುಬ್ರಹ್ಮಣ್ಯ, ಉಪನ್ಯಾಸಕರಾದ ಗಣೇಶ್ ಭಟ್, ಆರ್.ಎಸ್. ಗಣೇಶ್ ಪ್ರಸಾದ್, ವಾಣಿಶ್ರೀ ಹಾಗೂ ಕೆ.ಎಸ್. ರೇಖಾರಾಣಿ ಉಪಸ್ಥಿತರಿದ್ದರು.

ಸಿದ್ದಗಂಗಾ ಸಂಸ್ಥೆಯ ಸಂಸ್ಥಾಪಕ ಶಿವಣ್ಣ ಅವರ ಪ್ರತಿಮೆಯನ್ನು ವೇದಿಕೆಯ ಮೇಲಿರಿಸುವ ಮೂಲಕ ಅವರಿಗೆ ಸ್ಮರಿಸಲಾಯಿತು.

ಅನುಷಾ ಸ್ವಾಗತಿಸಿದರು ಹಾಗೂ ರೇಖಾ ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!