ನರ್ಸಿಂಗ್ ಕೋರ್ಸ್‍ಗಳಿಗೆ ಮರುಪರೀಕ್ಷೆಗೆ ವಿರೋಧ

ನರ್ಸಿಂಗ್ ಕೋರ್ಸ್‍ಗಳಿಗೆ ಮರುಪರೀಕ್ಷೆಗೆ ವಿರೋಧ

ದಾವಣಗೆರೆ, ಜ.13- ನರ್ಸಿಂಗ್ ಕೋರ್ಸ್‍ಗಳಿಗೆ ಮರು ಪರೀಕ್ಷೆ ನಡೆಸುವುದನ್ನು ವಿರೋಧಿಸಿ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನರ್ಸಿಂಗ್ ವಿದ್ಯಾರ್ಥಿಗಳು ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿ.ಬಿ.ರಸ್ತೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ, ರಾಜ್ಯದ ಉನ್ನತ ಶಿಕ್ಷಣ ಸಚಿವರು, ನರ್ಸಿಂಗ್ ಬೋರ್ಡ್ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಿ, ಎಲ್ಲಿ ಸಾಮೂಹಿಕ ನಕಲು ನಡೆದಿದೆಯೋ ಆಯಾ ಕೇಂದ್ರಗಳಲ್ಲಿ ಮಾತ್ರ ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

 ಕಳೆದ ನ.23ರಿಂದ 25ರವರೆಗೆ ನರ್ಸಿಂಗ್ ಕೋರ್ಸ್‍ಗಳ ಪರೀಕ್ಷೆ ನಡೆದಿದ್ದು, ರಾಜ್ಯದಲ್ಲಿ ಸುಮಾರು 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಷ್ಟು ಕಷ್ಟಪಟ್ಟು ಓದಿ, ಪರೀಕ್ಷೆ ಬರೆದಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿದೆ. ಈ ಕಾರಣಕ್ಕೆ ಏಕಾಏಕಿ ಮರು 

ಪರೀಕ್ಷೆಗೆ ಮಾಡುವುದರಿಂದ ಪ್ರಾಮಾಣಿಕವಾಗಿ, ಕಷ್ಟಪಟ್ಟು ಓದಿ, ಪರೀಕ್ಷೆ ಬರೆದಂತಹ ಉಳಿದಂತಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೀವ್ರ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ನಡೆಸಬಾರದು ಎಂದು ನರ್ಸಿಂಗ್ ವಿದ್ಯಾರ್ಥಿನಿ ಕೌಸರ್ ಬಾನು ಒತ್ತಾಯಿಸಿದರು.

ಯಾರೋ ಮಾಡಿದ ತಪ್ಪಿಗೆ ಎಲ್ಲರಿಗೂ ಮರು ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಲ್ಲ. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕು ಎಂಬ ಗಾದೆ ಮಾತಿನಂತೆ ಯಾರದ್ದೋ ತಪ್ಪಿಗೆ, ಯಾರಿಗೋ ಶಿಕ್ಷೆ ಎಂಬಂತಾಗಿದೆ ಮರು ಪರೀಕ್ಷೆ ವಿಚಾರ. ಕೇವಲ ಸಾಮೂಹಿಕ ನಕಲು  ಆದ ಪರೀಕ್ಷಾ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಿ,  ಉಳಿದ ಕೇಂದ್ರಗಳಲ್ಲಿ ಮರು ಪರೀಕ್ಷೆ ಬೇಡ ಎಂದು ನರ್ಸಿಂಗ್ ವಿದ್ಯಾರ್ಥಿ ಶ್ವೇತಾ ಒತ್ತಾಯಿಸಿದರು.

ಇದೇ 21ರಂದು ಮರು ಪರೀಕ್ಷೆಗೆ ಪರೀಕ್ಷಾ ಮಂಡಳಿ ದಿನಾಂಕ ನಿಗದಿಪಡಿಸಿ, ಆದೇಶ ಹೊರಡಿಸಿದೆ. ಆದರೆ, ನ್ಯಾಯಾಲಯವು ಮರು ಪರೀಕ್ಷೆಗೆ ಅವಕಾಶ  ಕೊಟ್ಟಿಲ್ಲ. ಬದಲಾಗಿ ವಿದ್ಯಾರ್ಥಿಗಳ ಆಸಕ್ತಿಯ ಮೇರೆಗೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದೆ. ಆದರೆ, ಪರೀಕ್ಷಾ ಮಂಡಳಿಯವರು ವಿದ್ಯಾರ್ಥಿಗಳಿಗೆ  ಯಾವುದೇ ಪೂರ್ವಾಪರ ಮಾಹಿತಿ ನೀಡದೆ, ಸಲಹೆ ನೀಡದೇ, ಚರ್ಚಿಸದೇ ಏಕಾಏಕಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಏಕಪಕ್ಷೀಯವಾಗಿ  ಮರು ಪರೀಕ್ಷೆ ನಡೆಸಲು ದಿನಾಂಕ ಘೋಷಣೆ ಮಾಡಿರುವುದು ಸರಿಯಲ್ಲ  ಎಂದು ಸಾಮಾಜಿಕ ಕಾರ್ಯಕರ್ತ ಹೆಚ್. ಎಸ್. ದೊಡ್ಡೇಶ್ ಹೇಳಿದರು.

ಪ್ರತಿಭಟನೆಯಲ್ಲಿ ಶೇರ್ ಅಲಿ, ಎನ್.ಅನಿಲ್, ಸೈಯದ್  ಮಲ್ಲಿಕ್, ಮಂಜು, ನಿಖಿಲ್, ಶಂಕರ್, ಚೇತನ್  ಕುಮಾರ್ ಸೇರಿ ದಂತೆ, ಜಿಲ್ಲೆಯ ವಿವಿಧ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!