ಹಾವೇರಿ, ಜ.8- ಪ್ರಪಂಚದ 190 ದೇಶದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕನ್ನಡ ನಾಡಿನಿಂದ ದೂರವಾಗಿ, ವಿದೇಶದಲ್ಲಿ ನೆಲೆಕಂಡು ಬದುಕು ರೂಪಿಸಿಕೊಳ್ಳುತ್ತಿರುವ ಅನಿವಾಸಿ ಕನ್ನಡಿಗರು ಸಂಘಟನೆಗಳನ್ನು ಕಟ್ಟಿಕೊಂಡು ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದ್ದಾರೆ. ಇವರ ಕನ್ನಡ ಪ್ರೀತಿ ನಾಡಿನ ಜನರಿಗೆ ತಿಳಿಯಲು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಾಯಿತು.
ಪಾಪು, ಚಂಪಾ ವೇದಿಕೆಯ ‘ವಿದೇಶದಲ್ಲಿ ಕನ್ನಡ ಡಿಂಡಿಮ’ ಗೋಷ್ಠಿಯಲ್ಲಿ ವಿವಿಧ ದೇಶಗಳಿಂದ ಆಗಮಿ ಸಿದ ಅನಿವಾಸಿ ಕನ್ನಡರಿಗರು ತಮ್ಮ ಕನ್ನಡ ಪ್ರೀತಿಯನ್ನು ಅನಾವರಣಗೊಳಿಸಿದರು. ಜೊತೆಗೆ ಕೊಲ್ಲಿ ರಾಷ್ಟ್ರಗಳ ಕನ್ನಡಿಗರ ದುಸ್ಥಿತಿ ಬಗ್ಗೆ ಗೋಷ್ಠಿ ಜನರ ಕಣ್ಣು
ತೆರೆಸಿತು.
ಅನಿವಾಸಿ ಕನ್ನಡಿಗರಿಗಾಗಿ ಸಚಿವಾಲಯ, ಮಂತ್ರಿ ನೇಮಕಕ್ಕೆ ಮನವಿ: ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ತೆರೆದು ಮಂತ್ರಿಗಳನ್ನು ನೇಮಕ ಮಾಡುವಂತೆ ದುಬೈ ಕನ್ನಡ ಸಂಘಟನೆಯ ಅಧ್ಯಕ್ಷ ಸರ್ವೊತ್ತಮ ಶೆಟ್ಟಿ ಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ದುಬೈ, ಸೌದಿ ಅರೇಬಿಯಾ ಹೊರತು ಪಡಿಸಿ ಮಧ್ಯ ಪ್ರಾಚ್ಯದ ಎಲ್ಲಾ ರಾಷ್ಟ್ರಗಳಲ್ಲಿಯೂ ಕನ್ನಡ ಸಂಘಟನೆಗಳು ಇವೆ. ಅಬುದಾಬಿ, ಶಾರ್ಜಾ, ಬಹರೇನ್, ಕುವೈತ್, ಕತಾರ್, ಒಮನ್ ಸಂಘಟನೆಗಳು ಸಕ್ರಿಯವಾಗಿ ಕನ್ನಡದ ಕೆಲಸಗಳನ್ನು ನಿರ್ವಹಿಸುತ್ತಿವೆ. ಬೆಹರೇನಲ್ಲಿ ಮೊಟ್ಟ ಮೊದಲ ಬಾರಿಗೆ 12 ಕೋಟಿ ವೆಚ್ಚದಲ್ಲಿ ಸ್ವಂತ ಜಾಗದಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ.
ಮುಖ್ಯಮಂತ್ರಿಗಳು ಈ ಭವನ ಉದ್ಘಾಟಿಸಿಬೇಕು ಎನ್ನುವುದು ಅನಿವಾಸಿ ಕನ್ನಡಿಗರ ಆಸೆಯಾಗಿದೆ. ಅಮೇರಿಕಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳಲ್ಲಿಯೂ ಕೂಡ ಕನ್ನಡ ಸಂಘಟನೆಗಳು ಕಾರ್ಯ ನಿರತವಾಗಿವೆ. ಮೆಲ್ಬೋರ್ನ್ ಕನ್ನಡ ಸಂಘದ ಉದ್ಯಮಿಗಳು ಸರ್ಕಾರದ ನೆರವು ಇಲ್ಲದೆ ಸ್ವಂತ ಹಣದಲ್ಲಿ ಜಾಗ ಖರೀದಿಸಿ ಸಂಘ ಕಟ್ಟಿದ್ದಾರೆ. ಕುವೈತ್ ಕನ್ನಡ ಸಂಘ ಬೆಂಗಳೂರಿನ 8 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಇಟಲಿ, ಥೈಲ್ಯಾಂಡ್, ನ್ಯೂಜಿಲ್ಯಾಂಡ್, ಹಾಂಕಾಂಗ್ ಹಾಗೂ ನ್ಯೂಯಾರ್ಕ್ ಕನ್ನಡ ಸಂಘಟನೆಗಳು ಕೆಲಸ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ನೀತಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಘಟಕಗಳ ಸಮಿತಿ ಸದಸ್ಯೆ ಡಾ.ಆರತಿ ಕೃಷ್ಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, 50 ಲಕ್ಷ ಅನಿವಾಸಿ ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಇವರಿಗಾಗಿಯೇ ಸರ್ಕಾರ ಪ್ರತ್ಯೇಕ ನೀತಿಯನ್ನು ಜಾರಿಗೆ ತರಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಮಾತನಾಡಿದ ಜರ್ಮನಿಯ ರವೀಂದ್ರ ಕುಲಕರ್ಣಿ ಹಾಗೂ ಲಂಡನ್‍ನ ಅಶ್ವಿನ್ ಶೇಷಾದ್ರಿ ಯುರೋಪ್ ದೇಶದ ಎಲ್ಲಾ ರಾಷ್ಟ್ರಗಳಲ್ಲೂ ಕನ್ನಡ ಸಂಘಟನೆಗಳು ಇವೆ. ಶನಿವಾರ ಹಾಗೂ ಭಾನುವಾರ ಮಕ್ಕಳಿಗೆ ವಿಶೇಷವಾಗಿ ಕನ್ನಡ ಭಾಷೆಯ ಶಿಕ್ಷಣ ನೀಡಲಾಗುತ್ತಿದೆ. 15 ದೇಶಗಳಲ್ಲಿ ನೆಲೆಸಿದ 4000 ಕನ್ನಡಿಗರ ಮಕ್ಕಳು ಇಂದು ಕನ್ನಡ ಕಲಿಯುತ್ತಿದ್ದಾರೆ. ಇದರೊಂದಿಗೆ ಸ್ಪ್ಯಾನಿಷ್ ಹಾಗೂ ಪ್ರೆಂಚ್ ಭಾಷೆಯ ಆಸಕ್ತ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಕನ್ನಡ ಸಂಘಟನೆ ತೆರೆಯಲಾಗಿದೆ. ಅಕ್ಕ ಮಾದರಿಯಲ್ಲಿ ನ್ಯೂಯಾರ್ಕ್‌ನ ನವಿಕಾ ಯೋರೋಪಿನಲ್ಲಿ ಕನಸು ಸಂಘಟನೆಗಳು ಕಾರ್ಯು ನಿರ್ವಹಿಸುತ್ತಿವೆ ಎಂದರು.
ಅಮೆರಿಕಾದಿಂದ ರಾಜ್ಯ ಮರಳಿರುವ ಕುಂದಾಪುರ ದಲ್ಲಿ ನೆಲಸಿರುವ ಫಿಜಿಯೋ ಥೆರಪಿಸ್ಟ್ ಜ್ಯೋತಿ ಮಹಾದೇವಿ ಸೇರಿದಂತೆ ಅಮೇರಿಕಾದಲ್ಲಿಯೇ 150ಕ್ಕೂ ಹೆಚ್ಚು ಕನ್ನಡ ಲೇಖಕರು ಇದ್ದಾರೆ. ಇವರಲ್ಲಿ 60ಕ್ಕೂ ಹೆಚ್ಚು ಲೇಖರ ಕೃತಿಗಳು ಪ್ರಕಟವಾಗಿವೆ ಎಂದರು.
ಸಂಶೋಧಕ ಎಸ್.ಎಲ್.ಶಿವಮೂರ್ತಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸರ್.ವಾಲ್ಟರ್ ವಿಲಿಯಟ್, ವಿಲಿಯಂ ಅಲೆನ್ ರಸೆಲ್, ಜಾನ್ ಫೇಟ್‍ಪುಲ್ ಫೀಟ್, ರೆವರೆಂಡ್ ಕಿಟೆಲ್, ಹರ್ಮನ್ ಮೋಗ್ಲಿಂಗ್, ವಿಲಿಯಂ ಕ್ಯಾರಿ ಸೇರಿದಂತೆ ನೂರಾರು ವಿದೇಶಿಯರು ಕನ್ನಡ ಭಾಷೆ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಎನ್.ಬಿ.ಕಾಳೆ ಸ್ವಾಗತಿಸಿ, ನಿರೂಪಿಸಿದರು. ಮ.ಕೃ.ಮೇಘಾಡಿ ವಂದಿಸಿದರು. ಡಿ.ರಾಜೇಶ್ ಪದ್ಮನಾಭ ನಿರ್ವಹಿಸಿದರು.