ಹರಿಹರ, ಜ. 5 – ಪ್ರಕೃತಿ ಹಾಗೂ ನಾಡಿನ ಸೌಂದರ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುವಂತಹ ಮತ್ತು ಕುಟುಂಬದ ಸದಸ್ಯರೊಂದಿಗೆ ನೋಡುವ ವಿಭಿನ್ನ ರೀತಿಯಲ್ಲಿ ‘ವೇದ’ ಚಲನಚಿತ್ರ ಮೂಡಿ ಬಂದಿದೆ ಎಂದು ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಹೇಳಿದರು.
ನಗರದ ಜಯಶ್ರೀ ಟಾಕೀಸ್‌ಗೆ ವೇದ ಚಲನಚಿತ್ರ ಪ್ರಚಾರದ ಅಂಗವಾಗಿ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕುಟುಂಬಕ್ಕೆ ಹತ್ತಿರ ಇರುವಂತಹ ವಿಚಾರ ಗಳನ್ನು ಈ ಚಲನಚಿತ್ರದಲ್ಲಿ ಸಾರ್ವಜನಿಕರಿಗೆ ಉಣಬಡಿಸಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಮನಸ್ಸಿನಲ್ಲಿ ಆತಂಕವನ್ನು ಇಟ್ಟುಕೊಳ್ಳದೆ ಟಾಕೀಸ್‌ಗೆ ಬರಬೇಕೆಂದು ಅವರು ಕರೆ ನೀಡಿದರು.
ದೇಶದ ಅನೇಕ ರಾಜ್ಯಗಳಲ್ಲೂ ಸಹ ಈ ಚಲನಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ತೆಲುಗು, ತಮಿಳು ಭಾಷೆಯಲ್ಲಿ ಚಲನಚಿತ್ರ ನಿರ್ಮಾಣ ಮಾಡಲಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಚಲನಚಿತ್ರ ಬಿಡುಗಡೆ ಆಗಲಿದೆ ಎಂದರು.
ಈ ವೇಳೆ ಶಾಸಕ ಎಸ್. ರಾಮಪ್ಪ, ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗದ ಜಿಲ್ಲಾ ಗೌರವ ಅಧ್ಯಕ್ಷ ಬಿ. ವಾಸುದೇವ್
ಅವರು ಶಿವರಾಜ್ ಕುಮಾರ್ ರವರಿಗೆ ಶಾಲು, ಹಾರ ಹಾಕಿ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ, ಜಯಶ್ರೀ ಟಾಕೀಸ್ ಮಾಲೀಕರಾದ ಹೆಚ್. ಸಂಜಯ್, ಸುಜಯ್ , ಜಯಶ್ರೀ ಟಾಕೀಸ್ ಗುತ್ತಿಗೆದಾರ ಮಂಜುನಾಥ್, ಪ್ರಕಾಶ್, ಭಾಗ್ಯದೇವಿ, ನಾಗಮ್ಮ, ನೇತ್ರಾವತಿ ಪ್ಯಾಟಿ, ವಿದ್ಯಾ, ಕನ್ನಡ ಪರ ಸಂಘಟನೆಯ ಮುಖಂಡರು ಹಾಗು ಇತರರು ಹಾಜರಿದ್ದರು.
ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆ, ಅಭಿಮಾನಿಗಳ ದಂಡನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಸಿಬ್ಬಂದಿ ಹರ ಸಾಹಸ ಪಟ್ಟರು.