ಜ. 11ಕ್ಕೆ ದೆಹಲಿಯಲ್ಲಿ ರಾಜ್ಯದ ಸಚಿವರ ಸಭೆ-ಸಚಿವ ಕೆ.ಎನ್‌. ರಾಜಣ್ಣ

ಜ. 11ಕ್ಕೆ ದೆಹಲಿಯಲ್ಲಿ ರಾಜ್ಯದ ಸಚಿವರ ಸಭೆ-ಸಚಿವ ಕೆ.ಎನ್‌. ರಾಜಣ್ಣ

ಮಲೇಬೆನ್ನೂರು, ಜ. 9- ದೆಹಲಿಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಇದೇ ದಿನಾಂಕ 11 ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಸಿಎಂ, ಡಿಸಿಎಂ ಸೇರಿದಂತೆ, ಜಿಲ್ಲಾ ಉಸ್ತುವಾರಿ ಸಚಿವರುಗಳ ಸಭೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕರೆದಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಅವರು ಮಂಗಳವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆದ 6ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಭೆಯಲ್ಲಿ ಸರ್ಕಾರದ ಸಾಧನೆ ಹಾಗೂ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸುರ್ಜೇವಾಲಾ ಅವರೂ ಬುಧವಾರ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟರು ಸಿಎಂ ಆಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ ಅವರು, ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ, ಸಿಎಂ ಹುದ್ದೆ ಖಾಲಿ ಆದಾಗ ಈ ಬಗ್ಗೆ ಉತ್ತರಿಸುತ್ತೇವೆ. ಪಕ್ಷದಲ್ಲಿ ಸಿಎಂ ಆಗುವವರ ಸಂಖ್ಯೆ ಹೆಚ್ಚಿದೆ.

ರಾಜ್ಯದಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಎಲ್ಲಾ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಹುದ್ದೆಯನ್ನು ಇತರೆ ಸಮುದಾಯಗಳಿಗೆ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯಗಳು ಬರುತ್ತಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ.

ಇನ್ನೂ 3 ಡಿಸಿಎಂ ಕೊಡಬೇಕೆಂಬ ನಮ್ಮ ಒತ್ತಾಯ ಈಗಲೂ ಇದ್ದು, ಸಚಿವರು ಕೂಡಾ ಬೆಂಬಲಿಸಿದ್ದಾರೆ. ಸೂಕ್ತ ಸಮಯದಲ್ಲಿ ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ಮಾಡಲಿದೆ. ನಾವೇ 135 ಶಾಸಕರಿದ್ದು, ಜೊತೆಗೆ ಇನ್ನಿಬ್ಬರ ಶಾಸಕರ ಬೆಂಬಲವೂ ಇದೆ. ಹೀಗಿರುವಾಗ ನಾವೇಕೆ ಜೆಡಿಎಸ್‌ ಶಾಸಕರನ್ನು ಖರೀದಿಸೋಣ? ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ  ರಾಜಣ್ಣ ಅವರು, ಸ್ವಾರ್ಥಕ್ಕೋಸ್ಕರ ಜೆಡಿಎಸ್‌, ಬಿಜೆಪಿ ಜೊತೆ ಕೈ ಜೋಡಿಸಿದೆ. ಅವರ ಜಾತ್ಯತೀತ ಸಿದ್ಧಾಂತ ಈಗ ಎಲ್ಲಿ ಹೋಯಿತೆಂದು ದೇವೇಗೌಡ್ರು, ಕುಮಾರಸ್ವಾಮಿ ರಾಜ್ಯದ ಜನರಿಗೆ ಉತ್ತರಿಸಬೇಕೆಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿ ಯಾಗಿ ಸ್ಪರ್ಧಿಸಲಿದ್ದು, 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ರಾಜಣ್ಣ ಹೇಳಿದರು.

ಜಗಳೂರು ಶಾಸಕ ದೇವೇಂದ್ರಪ್ಪ, ಟಿ. ಈಶ್ವರ್‌, ಹೊದಿಗೆರೆ ರಮೇಶ್‌, ಕೆ.ಪಿ. ಪಾಲಯ್ಯ, ಬಿ. ವೀರಣ್ಣ, ಜಿಗಳಿ ಆನಂದಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!