ಸಹಕಾರ ಕ್ಷೇತ್ರ ಆರ್ಯ ವೈಶ್ಯ ಸಮಾಜಕ್ಕೆ ಒಲಿದಿದೆ-ಅಭಿನಂದನಾ ಸಮಾರಂಭದಲ್ಲಿ ಅರುಣ್

ಸಹಕಾರ ಕ್ಷೇತ್ರ ಆರ್ಯ ವೈಶ್ಯ ಸಮಾಜಕ್ಕೆ ಒಲಿದಿದೆ-ಅಭಿನಂದನಾ ಸಮಾರಂಭದಲ್ಲಿ ಅರುಣ್

ದಾವಣಗೆರೆ, ಜ. 9 – ರಾಜ್ಯದಲ್ಲಿರುವ ಆರ್ಯ ವೈಶ್ಯ ಸಮಾಜದ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡುತ್ತಿರುವುದು ಸಮಾಜಕ್ಕೆ ಹೆಮ್ಮೆ ತರುವ ವಿಚಾರ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪ್ ಬ್ಯಾಂಕ್ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಆರ್.ಜಿ.ಶ್ರೀನಿವಾಸ ಮೂರ್ತಿ ಅವರಿಗೆ ಮೊನ್ನೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಬಹಳಷ್ಟು ವರ್ಷಗಳಿಂದ ಆರ್ಯವೈಶ್ಯ ಸಮಾಜಕ್ಕೆ ಒಲಿದಿದೆ. ಕರ್ನಾಟಕದಲ್ಲಿ ಆರ್ಯ ವೈಶ್ಯ ಸಮಾಜದ 72 ಸಹಕಾರ ಸಂಘಗಳು, 9 ಬ್ಯಾಂಕುಗಳಿದ್ದು, ಈ ಎಲ್ಲ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳು ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡುತ್ತಿವೆ. ಇದು ಸಮಾಜಕ್ಕೆ ಹೆಮ್ಮೆಯ ವಿಚಾರ ಎಂದು ಶ್ಲ್ಯಾಘಿಸಿದರು.

ಸ್ಥಳೀಯ ಶ್ರೀ ಕನ್ನಿಕಾ ಕೋ ಆಪರೇಟಿವ್ ಬ್ಯಾಂಕ್ ಹಲವಾರು ಜನಕ್ಕೆ ಸಹಕಾರ ನೀಡುತ್ತಿದೆ. ಸಮಾಜದ ಧುರೀಣರು ಕಳೆದ 50 ರಿಂದ 100 ವರ್ಷಗಳಿಂದಲೂ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಸಮಸ್ಯೆಗಳಿಲ್ಲ. ಎಲ್ಲ ಕಡೆ ಅದ್ಭುತವಾದ ಠೇವಣಿ ಇದೆ. ಗ್ರಾಹಕರು ಕೊಟ್ಟ ಹಣವನ್ನು ಈ ಸಮಾಜದ ಬ್ಯಾಂಕುಗಳು ಸರಿಯಾಗಿ ನಿರ್ವಹಣೆ ಮಾಡುತ್ತಿವೆ ಎನ್ನುವ ನಂಬಿಕೆ ಇದೆ ಎಂದರು.

ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಸಹಕಾರ ಕ್ಷೇತ್ರಕ್ಕೆ ಶಕ್ತಿ ಕೊಡುವ ಯೋಚನೆ ಮಾಡಿತು.ಇದೀಗ ಸಾಲ ಸಿಗದಿದ್ದ ಸಹಕಾರ ಕ್ಷೇತ್ರಗಳಲ್ಲಿ ಸಾಲ ಸಿಗುತ್ತಿದೆ. ಹಲವಾರು ರಾಜಕೀಯ ಮುಖಂಡರು ಸಹಕಾರ ಸಂಘಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿದರು.

ದೇಶದ 28 ಕೋಟಿ ಜನ ಸಹಕಾರ ಸಂಘಗಳಲ್ಲಿ ವಹಿವಾಟು ಮಾಡುತ್ತಿದ್ದಾರೆ. ಸಹಕಾರಿ ವಲಯದಲ್ಲಿ 14 ಲಕ್ಷ ಕೋಟಿ ಹಣ ಠೇವಣಿ ಇದೆ. ಈ ಹಣ ಅಪವ್ಯಯವಾಗಲು ಆರಂಭವಾದ ಮೇಲೆ 2014 ರಿಂದ ಸಹಕಾರ ಸಂಘಗಳಿಗೆ ನಿಯಮಾವಳಿ ಮಾಡದೇ ಹೋದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿದ ಕೇಂದ್ರ ಸರ್ಕಾರ ಮೊದಲ ಬಾರಿಗೆ ಆರ್‍ಬಿಐ ರೆಗ್ಯುಲೇಟ್‍ರ್ ಬಾಡಿ ತಂದಿತು. ನಂತರ ಸಹಕಾರ ಸಂಘಗಳ ವಹಿವಾಟಿನ ಮೇಲೆ ಹಿಡಿತ ಬಂದಿತು. ಇದರ ಪರಿಣಾಮ ಇದೀಗ ಠೇವಣಿದಾರರು, ಷೇರುದಾರರು ನೆಮ್ಮದಿಯಾಗಿದ್ದಾರೆ. ಆರ್‍ಬಿಐ ಗೈಡ್‍ಲೈನ್ ನಮ್ಮ ಸಮಾಜಕ್ಕೆ ಅವಶ್ಯಕತೆ ಇರಲಿಲ್ಲ. ಏಕೆಂದರೆ ನಮ್ಮ ಸಮಾಜವೇ ಆರ್‍ಬಿಐ ರೆಗ್ಯುಲೇಟರಿ ಬಾಡಿ ಇದ್ದಂತೆ ಇರುತ್ತದೆ. ಸಮಾಜದ ಎಲ್ಲ ಬಾಂಧವರು ಅದೇ ರೀತಿಯಲ್ಲಿ ಕೆಲಸ ಮಾಡುತ್ತಾರೆ. ನಾವು ಯಾರಿಗೂ ಮೋಸ ಮಾಡುವುದಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಹಕಾರಿ ಧುರೀಣ ಜೆ.ಆರ್.ಷಣ್ಮುಖಪ್ಪ ಮಾತನಾಡಿ,  ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಆರ್.ಜಿ.ಶ್ರೀನಿವಾಸ ಮೂರ್ತಿಯವರಿಗೆ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿರುವುದು ದಾವಣಗೆರೆ ಜಿಲ್ಲೆಗೆ ಸಂದ ಗೌರವವಾಗಿದೆ. ಆರಂಭದಲ್ಲಿ ವ್ಯಾಪಾರ ಕ್ಷೇತ್ರದಿಂದ ಸಹಕಾರ ಕ್ಷೇತ್ರಕ್ಕೆ ಬಂದು ಈ ಕ್ಷೇತ್ರದಲ್ಲಿ ಮಾಡಿರುವ ಅವರ ಸಾಧನೆ ನಿಜಕ್ಕೂ ಶ್ಲ್ಯಾಘನೀಯ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಾಸವಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಆರ್. ಎಲ್.ಪ್ರಭಾಕರ್ ಮಾತನಾಡಿ, ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಈ ಸಾಲಿನಲ್ಲಿ 4.50 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 1966 ರಲ್ಲಿ ಆರಂಭವಾದ ಈ ಸಂಘವು ಇಂದು 3700 ಕ್ಕೂ ಅಧಿಕ ಸದಸ್ಯರನ್ನು ಹೊಂದಿ ರಾಜ್ಯದಲ್ಲಿಯೇ ಅತ್ಯಂತ ಸುಸ್ಥಿತಿಯಲ್ಲಿರುವ ಸಹಕಾರಿ ವಲಯದ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಜಿ.ಶ್ರೀನಿವಾಸ ಮೂರ್ತಿ ಅವರನ್ನು  ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಜಿ.ಶ್ರೀನಿವಾಸ ಮೂರ್ತಿ, ಪ್ರಶಸ್ತಿ ಲಭಿಸಲು ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್, ಶ್ರೀಮತಿ ಹೇಮಾ ಆರ್.ಜಿ.ಶ್ರೀನಿವಾಸ ಮೂರ್ತಿ, ಕನ್ನಿಕಾ ಪರಮೇಶ್ವರಿ ಡೈಮಂಡ್ ಜ್ಯುಬಿಲಿ ವಿದ್ಯಾಪೀಠದ ಅಧ್ಯಕ್ಷ ಆರ್.ಎಸ್.ನಾರಾಯಣ ಸ್ವಾಮಿ, ಆರ್ಯ ವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಎಸ್.ಸುನೀಲ್, ಕನ್ನಿಕಾ ಪರಮೇಶ್ವರಿ ಕೋ ಆಪ್ ಬ್ಯಾಂಕಿನ ಉಪಾಧ್ಯಕ್ಷ ಕಾಸಲ್ ವಿ.ಮಂಜುನಾಥ್,ಪಡಗಲ್ ಪ್ರಶಾಂತ್ ಉಪಸ್ಥಿತರಿದ್ದರು. ಸಿ. ಅಜಯ್ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವತಿಯರ ಸಂಘದ ಸದಸ್ಯರು ನಡೆಸಿಕೊಟ್ಟ ಸಾಂಸೃತಿಕ ಕಾರ್ಯಕ್ರಮಗಳು ಜನರ ಮನ ಸೆಳೆದವು.

error: Content is protected !!