ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಿ-ಶಾಸಕ ಬಿ.ದೇವೇಂದ್ರಪ್ಪ

ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಿ-ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಜ.9- ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಟ್ಟು, ಉತ್ತಮ ಶಿಕ್ಷಣ ಕೊಡಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.

ಪಟ್ಟಣದ ಎನ್.ಎಂ‌.ಕೆ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಸಮಾಜದಲ್ಲಿ ಶಿಕ್ಷಣ ಪಡೆದವರಿಗೆ ಮಾತ್ರ ಗೌರವ, ಮನ್ನಣೆ ಲಭಿಸುತ್ತವೆ. ಅವರು ಜೀವನದಲ್ಲಿ  ಸದಾ ಸುಖಿಗಳಾಗಿರುವುದಲ್ಲದೆ ದೇಶಕ್ಕೆ ಆಸ್ತಿಯಾಗುತ್ತಾರೆ.

ಶಿಕ್ಷಣದ ಕಲಿಕೆಗೆ ಜಾತಿ, ಲಿಂಗ, ಧರ್ಮ, ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಕುಟುಂಬವೇ ಕೈಗನ್ನಡಿಯಾಗಿದೆ ಎಂದು ನಿದರ್ಶನ‌ ನೀಡಿದರು.

ಬರದನಾಡು ಜಗಳೂರು  ಶಿಕ್ಷಣ, ಸಂಸ್ಕಾರದಲ್ಲಿ ಶ್ರೀಮಂತವಾಗಿದೆ. ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಪಟ್ಟಣದಲ್ಲಿನ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲ್ಯಾಘನೀಯ ಎಂದರು.

ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ  ಡಾ.ಎನ್.ಬಿ.ಗಟ್ಟಿ ಮಾತನಾಡಿ, ಪ್ರಸಕ್ತವಾಗಿ ಪೋಷಕರ ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಭಾಷಾ ಕಲಿಕೆ ಕ್ಷೀಣಿಸುತ್ತಿದೆ. ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಭಾಷೆಯ ಓದು, ಬರವಣಿಗೆಗೆ ಅಧಿಕ ಒತ್ತುಕೊಟ್ಟು ಕನ್ನಡ ಭಾಷೆಯ ಮಹತ್ವ ಮನಗಾಣಬೇಕಿದೆ. ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಮಹನೀಯರು ದೇಶದಲ್ಲಿ ಸಾಧನೆಗೈದ ಇತಿಹಾಸವಿದೆ. ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದರು.

ಚಿತ್ರದುರ್ಗದ ಯಶೋದಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ಕುಮಾರ್ ಮಾತನಾಡಿ, ಕನ್ನಡ ಭಾಷೆ ಗ್ರಾಮೀಣ ಭಾಗದ ಕೋಲಾಟ, ಯಕ್ಷಗಾನಗಳಂತಹ  ಜಾನಪದ ಸೊಗಡಿನಲ್ಲಿ ಅಡಗಿದೆ. ಜಾನಪದ ಕಲೆ, ಉಳಿಸಿ ಬೆಳೆಸಬೇಕು. ಕನ್ನಡ ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.

ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಅತಿ ಹೆಚ್ವು ಅಂಕ‌ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ, ಪ್ರೋತ್ಸಾಹಿಸಲಾಯಿತು.

ಸಮಾರಂಭದಲ್ಲಿ ಎಸ್‌.ಎಸ್‌. ವಿವಿ ಸಂಘದ ಅಧ್ಯಕ್ಷ ಎನ್.ಎಂ.ಹಾಲಸ್ವಾಮಿ, ಕಾರ್ಯದರ್ಶಿ ಎನ್.ಎಂ.ಲೋಕೇಶ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ಶಂಷುದ್ದೀನ್  ಇದ್ದರು.

error: Content is protected !!