ದಾವಣಗೆರೆ, ಡಿ. 21 – ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಹಣ ಮತ್ತು ಆಭರಣಗಳಿದ್ದ ಬ್ಯಾಗ್ ಅನ್ನು ಪತ್ತೆ ಮಾಡಿ ವಾರಸುದಾರರಿಗೆ ಸ್ಥಳೀಯ ಬಸವನಗರ ಪೊಲೀಸರು ಒಪ್ಪಿಸಿದ್ದಾರೆ.
ಚನ್ನರಾಯಪಟ್ಟಣದ ವೀಣಾ ಎಂಬುವವರು ದಾವಣಗೆರೆಗೆ ಮದುವೆಗೆ ಬಂದಿದ್ದರು. ಬಿ.ಟಿ. ಗಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಬಂದು ನಂತರ ಮಧ್ಯಾಹ್ನ 3 ಗಂಟೆ ಸಮಯ ದಲ್ಲಿ ತನ್ನ ಮಗಳು ಕವಿತಾ ಅವರನ್ನು ಹಾಸ್ಟೆಲ್ ಗೆ ಬಿಡುವ ಸಲುವಾಗಿ ಆಟೋ ಹತ್ತಿದ್ದರು. ರಾಮ್ ಅಂಡ್ ಕೋ ಸರ್ಕಲ್ ಬಳಿ ಇಳಿಯುವಾಗ ತಮ್ಮ ಬಳಿ ಇದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟಿದ್ದರು.
ಮನೆಗೆ ಹೋದಾಗ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿರುವುದು ಗೊತ್ತಾಗಿ ಪುನಃ ತಾವು ಆಟೋ ಹತ್ತಿದ್ದ ಬಿ.ಟಿ. ಗಲ್ಲಿಗೆ ಬಂದು ವಿಚಾರ ಮಾಡಿ, ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಕೂಡಲೇ ಠಾಣೆಯ ಪಿಎಸ್ ಐ ಪ್ರಮೀಳಮ್ಮ, ಸಿಬ್ಬಂದಿ ಪ್ರಕಾಶ್, ಅಣ್ಣಯ್ಯ ಲಮಾಣಿ, ಗಣೇಶ್ ಅವರು ಸ್ಥಳೀಯ ಸಿ.ಸಿ. ಟಿ.ವಿ. ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ನಂತರ ಸ್ಮಾರ್ಟ್ ಸಿಟಿ ಸಿಸಿ ಟಿವಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ವೀಣಾ ಅವರು ಪ್ರಯಾಣಿಸಿದ ಆಟೋ ನಂಬರ್ ಕೆಎ-17 ಎ- 3569 ಎಂದು ಪತ್ತೆ ಮಾಡಿದ್ದಾರೆ. ಬಳಿಕ ಆಟೋ ಚಾಲಕ ಬಾಷಾನಗರದ ಮುಕ್ತಿಯಾರ್ ಗೆ ಫೋನ್ ಮಾಡಿ ಠಾಣೆಗೆ ಕರೆಯಿಸಿ ವಿಚಾರಿಸಿದ್ದಾರೆ.
ಆಟೋ ಚಾಲಕ ಆಟೋದಲ್ಲಿ ಬಿಟ್ಟು ಹೋಗಿದ್ದ ಹಣ ಆಭರಣ ವಿದ್ದ ಬ್ಯಾಗನ್ನು ಸುರಕ್ಷಿತವಾಗಿ ಎತ್ತಿಟ್ಟುಕೊಂಡಿದ್ದರು. ಪೊಲೀಸರಿಗೆ ಒಪ್ಪಿಸಿ, ವ್ಯಾನಿಟಿ ಬ್ಯಾಗ್ ಅನ್ನು ಕಳೆದುಕೊಂಡವರಿಗೆ ಕೊಡಿಸಲಾಗಿದೆ. ಬ್ಯಾಗ್ ನಲ್ಲಿದ್ದ ಹಣ ಹಾಗೂ ಆಭರಣಗಳು ಯಥಾಸ್ಥಿತಿಯಲ್ಲಿರುವುದಾಗಿ ವೀಣಾ ತಿಳಿಸಿದ್ದಾರೆ. ವ್ಯಾನಿಟಿ ಬ್ಯಾಗ್ ಅನ್ನು ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಾದ ಮುಕ್ತಿಯಾರ್ ಅವರನ್ನು ಬಸವ ನಗರ ಠಾಣೆಯಲ್ಲಿ ಸನ್ಮಾನಿಸಲಾಯಿತು.