ಹರಪನಹಳ್ಳಿ : ಕೋಟೆ ಶ್ರೀ ಕಾಳಮ್ಮ ದೇವಸ್ಥಾನದ ಒತ್ತುವರಿ ಜಾಗ ತೆರವು

ಹರಪನಹಳ್ಳಿ : ಕೋಟೆ ಶ್ರೀ ಕಾಳಮ್ಮ ದೇವಸ್ಥಾನದ ಒತ್ತುವರಿ ಜಾಗ ತೆರವು

ಹರಪನಹಳ್ಳಿ, ಡಿ.21- ಪಟ್ಟಣದ ಕೋಟೆ ಶ್ರೀ ಕಾಳಮ್ಮ ದೇವಸ್ಥಾನದ ಸುತ್ತ-ಮತ್ತಲಿನ ಸರ್ಕಾರಿ ಜಾಗದಲ್ಲಿ ಒತ್ತುವರಿಯಾಗಿದ್ದ ಅನಧಿಕೃತ ಕಟ್ಟಡಗಳನ್ನು ಗುರುವಾರ ತಾಲ್ಲೂಕು ಆಡಳಿತದಿಂದ ಪುರಸಭೆ ಸಹಕಾರದೊಂದಿಗೆ ಪೊಲೀಸ್ ಬಂದೋಬಸ್ತ್‍ನಲ್ಲಿ ತೆರವುಗೊಳಿಸ ಲಾಯಿತು.

ತೆರವು ಕಾರ್ಯಚರಣೆಯಲ್ಲಿ ಒಂದು ವಾಸದ ಮನೆ ಸೇರಿದಂತೆ 11 ಕಟ್ಟಡ, ಶೆಡ್‍ಗಳನ್ನು ಜೆಸಿಬಿಯಿಂದ ತೆರವುಗೊಳಿಸ ಲಾಯಿತು. ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ವೀರನಗೌಡ ಹಾಗೂ ಕಲೀಮವುಲ್ಲಾರವರ ಕಟ್ಟಡಗಳನ್ನು ಮಾತ್ರ ತೆರವುಗೊಳಿಸದೇ ಹಾಗೆ ಬಿಡಲಾಯಿತು. ಒಬ್ಬ ಮಹಿಳೆ ತಮ್ಮ ಮನೆ ತೆರವುಗೊಳಿ ಸುವುದನ್ನು ಕಂಡು ನಾವು ಬಡವರು, ನಮಗೆ ಮನೆ ಇಲ್ಲ, ಬೇರೆ ಕಡೆಯಾದರೂ ಮನೆ ಕೊಡಿ ಎಂದು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದು ಕಂಡು ಬಂದಿತು.

ಅಂತಿಮವಾಗಿ ತಡೆಯಾಜ್ಞೆ ಕಟ್ಟಡಗಳನ್ನು ಹೊರತುಪಡಿಸಿ ಒತ್ತುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಸಿಪಿಐ ನಾಗರಾಜ ಎಂ.ಕಮ್ಮಾರ್ ನೇತೃತ್ವದಲ್ಲಿ ಪಿಎಸ್‍ಐಗಳಾದ ಶಂಭುಲಿಂಗ ಹಿರೇಮಠ್, ಲಿಂಗಯ್ಯ, ನಾಗರಾಜ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು.

ತಹಶೀಲ್ದಾರ್ ಗಿರೀಶ್‌ಬಾಬು, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಸರ್ವೇಯರ್ ದಿವಾಕರ್, ಕಂದಾಯ ನಿರೀಕ್ಷಕ ರಾಘವೇಂದ್ರ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಇದ್ದರು.

error: Content is protected !!