ದಾವಣಗೆರೆ, ಡಿ. 20 – ತಾಲ್ಲೂಕಿನ ಹಾಲುವರ್ತಿ ಗ್ರಾಮದ ಪ್ರಗತಿಪರ ರೈತ ದ್ಯಾಮಣ್ಣ ಅವರಿಗೆ ನವದೆಹಲಿಯಲ್ಲಿ ನಡೆದ ‘ಮಹೇಂದ್ರ ಟ್ರ್ಯಾಕ್ಟರ್ಸ್’ ರವರ ‘ರಾಷ್ಟ್ರೀಯ ಕೃಷಿ ಜಾಗರಣೆ ಮಿಲೇನಿಯರ್ ಫಾರ್ಮರ್’ ಪ್ರಶಸ್ತಿ ಲಭಿಸಿದೆ.
ಕೃಷಿಯಲ್ಲಿ ಸದಾ ಪ್ರಗತಿಪರ ಚಿಂತನೆ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಇವರನ್ನು, ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಾಮ ನಿರ್ದೇಶನ ಮಾಡಲಾಗಿತ್ತು.
ಕೃಷಿ ಬೆಳೆಗಳಾದ ಮೆಕ್ಕೆಜೋಳ, ತೊಗರಿ, ರಾಗಿ, ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಈರುಳ್ಳಿ, ಗುಲಾಬಿ, ಕೃಷಿ ಉತ್ತೇಜಿತ ಉಪಕಸುಬು ಗಳಾದ ಹೈನುಗಾರಿಕೆ, ಮೀನುಗಾರಿಕೆಯಲ್ಲಿ ದ್ಯಾಮಣ್ಣ ಪರಿಣಿತರು.
ಕೇಂದ್ರ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಹಾಗೂ ಗುಜರಾತ್ ರಾಜ್ಯಪಾಲ ಆಚಾರ್ಯ ದೇವ ವ್ರತ್ ರವರಿಂದ ಪ್ರಶಸ್ತಿ ಸ್ವೀಕರಿಸಿದ ದ್ಯಾಮಣ್ಣನವರು ತಮ್ಮೆಲ್ಲಾ ಬೆಳೆವಣಿಗೆಗೆ ಕಾರಣೀಭೂತರಾದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಚಿರಋಣಿಯಾಗಿರು ವೆನೆಂದು ಹರ್ಷ ವ್ಯಕ್ತ ಪಡಿಸಿದರು.
ಕೃಷಿಯಲ್ಲಿ ವಿನೂತನ ತಾಂತ್ರಿಕತೆಗಳನ್ನು ಕರಗತ ಮಾಡುವುದು ಇವರಿಗೆ ಬಹಳ ಸುಲಭ. ಜೊತೆಗೆ ಕೃಷಿ ಕುಟುಂಬವನ್ನು ಲಾಭದಾಯಕವಾಗಿ ಮುನ್ನಡೆಸುವಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವುದು, ಜಿಲ್ಲೆಯ ಇತರೆ ರೈತರಿಗೆ ಮಾದರಿ ಎಂದು ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ.ಪಿ. ಬಸವರಾಜಪ್ಪ ಅಭಿಪ್ರಾಯಪಟ್ಟರು.
ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಅವರ ಮಾರ್ಗದರ್ಶನದಲ್ಲಿ ಮೀನು ಜಲ ಕೃಷಿಯನ್ನು ಕೈಗೊಂಡು ಯಶಸ್ವಿಯಾದ ಪ್ರಗತಿಪರ ರೈತರಲ್ಲಿ ಇವರೂ ಒಬ್ಬರು. ಲಾಭದಾಯಕ ಕೃಷಿಯಲ್ಲಿ ಬಂಡವಾಳ ರಹಿತವಾಗಿ ನೈಸರ್ಗಿಕ ಕಷ್ಟಗಳನ್ನು ಅಪ್ಪಿಕೊಂಡು ಬೇಸಾಯ ಮಾಡುವುದರಲ್ಲಿ ದ್ಯಾಮಣ್ಣ ನವರು ಸಿದ್ಧಹಸ್ತರು ಎಂದು ಡಾ. ಟಿ.ಎನ್. ದೇವರಾಜ ಸಂತಸ ಹಂಚಿಕೊಂಡರು.
ಬರಗಾಲದಲ್ಲಿ ಬೋರ್‍ವೆಲ್‍ಗಳು ಬತ್ತಿ ಹೋದ ಸಂದರ್ಭದಲ್ಲಿ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ರವರ ಮಾರ್ಗದರ್ಶನದಲ್ಲಿ ಮಳೆನೀರು ಕೊಯ್ಲು ಮಾಡಿ ಒಂದು ಎಕರೆ ಕೃಷಿ ಹೊಂಡವನ್ನು ತೋಟಗಾರಿಕೆ ಇಲಾಖೆಯ ಅನುದಾನದಲ್ಲಿ ನಿರ್ಮಿಸಿ ಯಶಸ್ವಿಯಾಗಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಗುಲಾಬಿಯನ್ನು ಬೆಳೆಯುತ್ತಿದ್ದಾರೆ. ಈರುಳ್ಳಿಯಲ್ಲಿ ‘ಭೀಮಾ ಶಕ್ತಿ’ ತಳಿಯ ಯಶಸ್ವಿ ಬೆಳೆ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕುರ್ಫಿ ಜ್ಯೋತಿ ಆಲೂಗಡ್ಡೆ ಬೆಳೆದ ಹೆಮ್ಮೆಯ ರೈತ ದ್ಯಾಮಣ್ಣನವರು ಎಂದು ತಜ್ಞರು ತಿಳಿಸಿದರು.
ಒಣ ಬೇಸಾಯದಲ್ಲಿ ಕೂರಿಗೆ ಭತ್ತವನ್ನು ಬೆಳೆದಿದ್ದು, ತೊಗರಿಯ ಬಿಆರ್‍ಜಿ-5 ತಳಿಯನ್ನು ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದು, ರಾಗಿಯಲ್ಲಿ ಎಂ.ಎಲ್-365 ತಳಿಯ ಬೇಸಾಯ ಇವೆಲ್ಲಾ ಕೃಷಿಯ ಸಾಧನೆಗಳು ಎಂದು ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ತಿಳಿಸಿದರು.
ಇದಲ್ಲದೇ ಹೈನುಗಾರಿಕೆಯಲ್ಲಿ ತನ್ನದೇ ಪ್ರಯೋಗಶೀಲತೆಯನ್ನು ಕೈಗೊಂಡಿರುವುದು ಅಭಿನಂದನಾರ್ಹ. ‘ಆಟೋ ಡ್ರಿಂಕರ್ಸ್’ ಎಂಬ ನೀರು ಕುಡಿಯುವ ಸಾಧನವನ್ನು ಅತೀ ಕಡಿಮೆ ಖರ್ಚಿನಲ್ಲಿ ವಿನ್ಯಾಸಗೊಳಿಸಿ ನೂರಾರು ರೈತರಿಗೆ ಮಾರ್ಗದರ್ಶನ ನೀಡಿರುವುದು ಹಾಗೂ ತೋಟ ಗಾರಿಕೆ ಬೆಳೆಗಳಲ್ಲಿ ಕಳೆ ನಿರ್ವಹಣೆಗೆ ಯಾಂತ್ರೀಕೃತ ಸ್ಲ್ಯಾಶರ್ ಚೈನನ್ನು ಮಾರ್ಪಡಿಸಿರುವುದು ದ್ಯಾಮಣ್ಣ ನವರ ಕ್ರಿಯಾಶೀಲ ಬುದ್ಧಿವಂತಿಕೆಗೆ ಸಾಕ್ಷಿ.
ದ್ಯಾಮಣ್ಣನವರ ಈ ಸಾಧನೆಗೆ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.