ಹರಿಹರ, ಡಿ,20- ಶ್ರೀ ಕನಕದಾಸರ 536 ನೇ ಜಯಂತ್ಯೋತ್ಸವದ ಅಂಗವಾಗಿ, ಕರ್ನಾಟಕ ಕುಸ್ತಿ ಸಂಘ, ದಾವಣಗೆರೆ ಕುಸ್ತಿ ಸಂಘ ಹಾಗೂ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 21 ರಿಂದ 25 ರವರೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಮತ್ತು ರಾಷ್ಟ್ರ ಮಟ್ಟದ ಕರ್ನಾಟಕ ತಂಡದ ಆಯ್ಕೆ ಪಕ್ರಿಯೆಯನ್ನು ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸ ಲಾಗಿದೆ ಎಂದು ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಎನ್.ಹೆಚ್. ನಂದಿಗಾವಿ ಶ್ರೀನಿವಾಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಳೆ ದಿನಾಂಕ 21 ರ ಗುರುವಾರ ಸಂಜೆ 4 ಗಂಟೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿ ಮೆರವಣಿಗೆ ಮತ್ತು ಕುಸ್ತಿಗೆ ಚಾಲನೆ ನೀಡಲಾಗುತ್ತದೆ. ದಿವ್ಯ ಸಾನ್ನಿಧ್ಯವನ್ನು ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ಕ್ರೀಡಾ ಜ್ಯೋತಿಯ ಚಾಲನೆಯನ್ನು ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಹೆಚ್.ಎಸ್. ಶಿವಶಂಕರ್, ಎಂ.ಹೆಚ್.ಬಿ. ಚಂದ್ರಣ್ಣ, ಪೈ. ಜಡಿಯಪ್ಪ, ಸುರೇಶ್ ಚಂದಾಪೂರ್, ಇದಾಯತ್ ಪತುಲಿ ಮಾಡಲಿದ್ದಾರೆ.
ದಿನಾಂಕ 24 ರಂದು ಸಂಜೆ 5 ಗಂಟೆಗೆ ಎಲ್ಲಾ ವಿಭಾಗಗಳ ಅಂತಿಮ ಕುಸ್ತಿ ಪಂದ್ಯಗಳು ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ, ರಡ್ಡಿ ಗುರುಪೀಠದ ಜಗದ್ಗುರು ಶ್ರೀ ವೇಮನಾನಂದಪುರಿ ಮಹಾಸ್ವಾಮೀಜಿ, ನಂದಿಗುಡಿ ಶ್ರೀ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ, ಮುಸ್ಲಿಂ ಸಮುದಾಯದ ಧರ್ಮಗುರುಗಳಾದ ಮೌಲಾನಾ ಖಾಜಿ ಸೈಯದ್ ಷಂಶುದ್ದೀನ್ ಸಾಹೇಬ್, ಕ್ರೈಸ್ತ ಧರ್ಮಗುರುಗಳಾದ ಫಾದರ್ ಜಾರ್ಜ್ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ದಾವಣಗೆರೆ ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ಜೆ. ಶ್ರೀನಿವಾಸ್, ಖಜಾಂಚಿ ಶ್ರೀನಿವಾಸ್ ಅಂಗರಕೋಡಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಇತರರು ಭಾಗವಹಿಸಲಿದ್ದಾರೆ.
ಕುಸ್ತಿ ತರಬೇತುದಾರ ವಿನೋದ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಕುಸ್ತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರೇವಣಪ್ಪ ಧ್ಯಾನನಾಯ್ಕರ್, ಕಾರ್ಯದರ್ಶಿ ಜಗದೀಶ್ ಚೂರಿ, ಖಜಾಂಚಿ ಅಣ್ಣಪ್ಪ ಶಾವಿ, ಸಂಘಟನಾ ಕಾರ್ಯದರ್ಶಿಗಳಾದ ಪಾಲಾಕ್ಷಪ್ಪ, ಶಿವಾನಂದ ವೈ, ಮಾರುತಿ, ವಿಜಯಕುಮಾರ್ ರಟ್ಟಿಹಳ್ಳಿ, ಬೀರೇಶ್, ಶಿವು, ನಾರಾಯಣ, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.