ರಾಣೇಬೆನ್ನೂರು, ಡಿ. 20 – ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮಾಜದವರನ್ನು ಸರ್ಕಾರ ಲಕ್ಷ ಲಕ್ಷ ಖರ್ಚು ಮಾಡಿ ಸರ್ಕಾರ ನಿರ್ಮಿಸಿದ ಸಾರ್ವಜನಿಕ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ ಹಾಕಿ ಮುಳ್ಳು, ಕಲ್ಲುಗಳನ್ನು ಹಾಕಿ, ಇನ್ನೂ ಅಸ್ಪೃಶ್ಯತೆಯ ಅಟ್ಟಹಾಸ ಮೆರೆಯುತ್ತಿರುವುದನ್ನು ಖಂಡಿಸಿ ನ್ಯಾಯಕ್ಕಾಗಿ, ಸಮಾನತೆಗಾಗಿ, ಪರಿಶಿಷ್ಟ ಮಹಿಳೆಯರು, ಮಕ್ಕಳಾದಿಯಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಘಟನೆ ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲಕನಹಳ್ಳಿಯಲ್ಲಿ ಇಂದು ಜರುಗಿದೆ.
ವಾಲ್ಮೀಕಿ ಮತ್ತು ಕುರುಬ ಸಮಾಜ ಎರಡೇ ಎರಡು ಕೋಮಿನ ಜನರು ವಾಸಿಸುವ ಈ ಪುಟ್ಟ ಗ್ರಾಮದಲ್ಲಿ ಈ ಹಿಂದಿನ ಶಾಸಕರ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯಲ್ಲಿ ವಾಲ್ಮೀಕಿ ಕೋಮಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂದು ನಿರ್ಬಂಧ ವಿಧಿಸಿ ಅಲ್ಲಿ ಕಲ್ಲು ಮುಳ್ಳುಗಳನ್ನು ಹಾಕಿರುವುದೇ ಈ ಘಟನೆಗೆ ಸಾಕ್ಷಿಯಾಗಿದೆ.
ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತದ ಗಮನಕ್ಕೆ ತಂದು ನ್ಯಾಯ ಒದಗಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಮತ್ತು ದಿನನಿತ್ಯ ದೈನಂದಿನ ಕೆಲಸಕ್ಕೆ ಅವಶ್ಯವಿರುವ ರಸ್ತೆಯಲ್ಲಿ ಓಡಾಡದಂತೆ ಬಹಿಷ್ಕಾರ ಹಾಕಿರುವುದನ್ನು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಸಮಾಜ ಕಲ್ಯಾಣಾಧಿಕಾರಿಗಳು, ಪೊಲೀಸ್ ಇಲಾಖೆಯವರ ಗಮನಕ್ಕೆ ತಂದಿದ್ದರೂ ಕೂಡಾ ಸರ್ಕಾರ ನಿರ್ಲಕ್ಷ್ಯ ಮಾಡಿದೆ.
ಕಾರಣ ನಮಗೆ ನ್ಯಾಯ ಸಿಗಬೇಕು, ನಾವು ಕೂಡಾ ಎಲ್ಲರಂತೆ ನೆಮ್ಮದಿಯಿಂದ ಬಾಳಲು ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಇಂದು ಬೆಳಗ್ಗೆ 9 ಘಂಟೆಯಿಂದ ಬಹಿಷ್ಕಾರ ಹಾಕಿರುವ ಗ್ರಾಮದ ರಸ್ತೆಯ ಮುಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳಾದಿಯಾಗಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೂ ಕೂಡ ಇದುವರೆಗೂ ಜಿಲ್ಲಾಡಳಿತ, ತಾಲ್ಲೂಕಾಡಳಿತ ವು ನ್ಯಾಯ ಕೊಡಿಸಲು ಗ್ರಾಮಕ್ಕೆ ಬಾರದೇ ಇರುವುದು ಸಾಕಷ್ಟು ನೋವು ತಂದಿದೆ ಎಂದು ಧರಣಿ ನಿರತರು, ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಮುಂದುವರಿದಿದೆ. ಧರಣಿ ಸತ್ಯಾಗ್ರಹದಲ್ಲಿ ಕಮಲಮ್ಮ ಪಾಟೀಲ, ನೇತ್ರಾ ಎಸ್. ಪಾಟೀಲ, ಗೀತಾ ಪಾಟೀಲ, ವೀಣಾ ಓಲೇಕಾರ, ರೇಖಮ್ಮ ಎಚ್. ರೇವಣ ಗೌಡ್ರ, ಶ್ರೀಕಾಂತ ಪಾಟೀಲ, ರಾಜು ಓಲೇಕಾರ, ಕೊಟ್ರಪ್ಪ ನಂದಿಗಾವಿ, ಹನುಮಂತಪ್ಪ ಓಲೇಕಾರ, ಎಸ್. ಹನುಮಂತಪ್ಪ ಗೌಡ್ರ ಮುಂತಾದವರು ತಮ್ಮ ಸಣ್ಣ ಸಣ್ಣ ಮಕ್ಕಳೊಂದಿಗೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಹಲಗೇರಿ ಪಿ.ಎಸ್.ಐ. ಬಿರಾದಾರ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ.