ಹರಿಹರ, ಡಿ.18- ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿ ಕೊಳ್ಳುವುದರ ಮೂಲಕ ಮುಂದಿನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ವಿರೂಪಾಕ್ಷಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕರಿಯರ್ ಗೈಡನ್ಸ್ ಮತ್ತು ಪ್ಲೇಸ್ಮೆಂಟ್ ಸೆಲ್, ಐಕ್ಯೂಎಸಿ ಹಾಗೂ ಚಾಣಕ್ಯ ಕೋಚಿಂಗ್ ಸೆಂಟರ್, ದಾವಣಗೆರೆ ಇವರ ಸಹಯೋಗದಲ್ಲಿ `ಎಂಪ್ಲಾಯ್ಮೆಂಟ್ ಸ್ಕಿಲ್ಸ್’ ವಿಷಯ ಕುರಿತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.
ಕಾರ್ಯಕ್ರಮದಲ್ಲಿ ಚಾಣಕ್ಯ ಕೋಚಿಂಗ್ ಸೆಂಟರ್ನ ನಿರ್ದೇಶಕ ಚಿದಂಬರ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕು. ಬಿಂದುಶ್ರೀ ಮತ್ತು ನಿವೃತ್ತ ಪ್ರಾಧ್ಯಾಪಕ ಪ್ರೊ. ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ತೆಗೆದುಕೊಳ್ಳುವ, ಪರೀಕ್ಷೆಗಳನ್ನು ಎದುರಿಸುವ ಬಗೆ, ಪರೀಕ್ಷೆಗೆ ಬೇಕಾದ ಅಧ್ಯಯನ ಸಾಮಗ್ರಿ, ತರಬೇತಿ, ಸಂದರ್ಶನದ ಪೂರ್ವ ತರಬೇತಿ, ಪರೀಕ್ಷಾ ತಯಾರಿ ಕುರಿತು ವಿವಿಧ ಸಾಧಕರ ವಿಡಿಯೋಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವನೆ ಮತ್ತು ಸ್ವ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಾಗಾರದಲ್ಲಿ ಉದ್ಯೋಗ ಕೋಶದ ಸಹ ಸಂಚಾಲಕ ಡಾ.ಬಾಬು.ಕೆ.ಎ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಪ್ರೊ. ಮಂಜುನಾಥ ನರಸಗೊಂಡರ ಮತ್ತು ಅಧ್ಯಾಪಕರು ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು. ಆಶಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ. ತಿಪ್ಪೇಸ್ವಾಮಿ ಹೆಚ್ ಸ್ವಾಗತಿಸಿದರು, ಡಾ. ಅನಂತನಾಗ್ ಹೆಚ್. ಪಿ ನಿರೂಪಿಸಿ ದರು. ಡಾ. ಹನುಮಂತಪ್ಪ ಕೆ.ಎಂ ವಂದಿಸಿದರು.