ಚದುರಂಗ ರಾಜಕ್ರೀಡೆ ಮಾತ್ರವಲ್ಲ, ಅದರದೇ ಪ್ರಬುದ್ಧ ಶಾಸ್ತ್ರವೂ ಮೈತಳೆದಿದೆ

ಚದುರಂಗ ರಾಜಕ್ರೀಡೆ ಮಾತ್ರವಲ್ಲ, ಅದರದೇ ಪ್ರಬುದ್ಧ ಶಾಸ್ತ್ರವೂ ಮೈತಳೆದಿದೆ

ಹರಪನಹಳ್ಳಿ, ಡಿ.18- ಆಟಗಳು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕವಾಗಿ ಪ್ರಬಲರನ್ನಾಗಿಸುವಲ್ಲಿ ಮಹತ್ವದ್ದಾಗಿವೆ ಎಂದು ಪ್ರಾಂಶುಪಾಲ ಡಾ. ಷಣ್ಮುಖ ಗೌಡ ಎಸ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರ ಆಶ್ರಯದಲ್ಲಿ   ಅಂತರ ಮಹಾವಿದ್ಯಾಲಯಗಳ ಚದುರಂಗ ಪಂದ್ಯಾವಳಿ  ಪುರುಷ ಮತ್ತು ಮಹಿಳೆಯರಿಗೆ ಹಾಗೂ ತಂಡದ ಆಯ್ಕೆ ಪ್ರಕ್ರಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂತರರಾಷ್ಟ್ರೀಯ ಆಟಗಳಲ್ಲಿ ಒಂದಾಗಿರುವ ಚದುರಂಗ ರಾಜಕ್ರೀಡೆ ಎಂದು ಪ್ರಖ್ಯಾತಿ ಹೊಂದಿರುವುದು ಮಾತ್ರವಲ್ಲ, ಅದರದೇ ಒಂದು ಪ್ರಬುದ್ಧ ಶಾಸ್ತ್ರವೂ ಮೈತಳೆದಿದೆ. ಜಗತ್ತಿನ ಮೊದಲ ಮುದ್ರಿತ ಗ್ರಂಥ ಬೈಬಲ್ಲಾದರೆ ಎರಡನೇ ಮುದ್ರಿತ ಗ್ರಂಥ ಚದುರಂಗದಾಟದ ಬಗೆಗೆ ಬರೆಯಲ್ಪಟ್ಟಿರುವುದು ಅದರ ಹಿರಿಮೆಗೊಂದು ಸಾಕ್ಷಿ. ಇದು ಕಾರ್ತಿಕ ಮಾಸದ ಮೊದಲನೇ ರಾತ್ರಿ ಧಾರ್ಮಿಕ ಕ್ರೀಡೆಯಾದ ಚದುರಂಗ ವನ್ನು ಆಡಲಾಗುತ್ತಿತ್ತೆಂದು ರಾಮಾ ಯಣದಲ್ಲಿ ಉಲ್ಲೇಖಿತವಾಗಿದೆ. ಇದನ್ನು ನೋಡುವಾಗ 4-5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಈ ಕ್ರೀಡೆ ಜನಪ್ರಿಯವಾಗಿತ್ತೆಂದು ತಿಳಿಯುತ್ತದೆ. ಹರಪ್ಪಾ ಮಹೆಂಜೊದಾ ರೊವಿನಲ್ಲಿ ನಡೆಸಿದ ಉತ್ಖನನಗಳಲ್ಲಿ ಲಭಿಸಿದ ಚದುರಂಗದ ದಾಳಗಳೂ ಅದರ ಪುರಾತನ ಇತಿಹಾಸಕ್ಕೆ ಸಾಕ್ಷಿಯಾಗಿವೆ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೊಟ್ರೇಶ್ ಹೆಚ್. ಮಾತನಾಡಿ, ಚದುರಂಗ ಭಾರತದಲ್ಲೇ ಹುಟ್ಟಿದ್ದೆಂಬುದರಲ್ಲಿ ಅನುಮಾನವಿಲ್ಲ. ಕ್ರಿ.ಶ.100ರ ಸುಮಾರಿನ ಚಿಕ್ಕ ಗ್ರಂಥವೊಂದರಲ್ಲಿ ಚದುರಂಗದಾಟದ ಹಲಗೆಯನ್ನು `ಅಷ್ಟಪದ’ವೆಂದೂ ಕ್ರಿ.ಶ. 600ರ ಜೈನಗ್ರಂಥದಲ್ಲಿ ಅದನ್ನು `ಅತ್ತವದಯ’ ಎಂದೂ ಕರೆಯಲಾಗಿದೆ. ಬಂಗಾಳದ ಹೆಸರಾಂತ ವಿದ್ವಾಂಸ ಸುಲ್ಪನಿಯು ಈ ಆಟದ ನಿಯಮಗಳ ಕುರಿತು ಸಂಸ್ಕೃತದಲ್ಲಿ `ಚದುರಂಗ ದೀಪಿಕ’ ಎಂಬ ಗ್ರಂಥವನ್ನು ರಚಿಸಿದ್ದಾನೆ. ರಾಜ, ಆನೆ, ಕುದುರೆಗಳೊಂದಿಗೆ ಆಗ ರಥದ ಬದಲು ದೋಣಿಯನ್ನು ಬಂಗಾಳದಲ್ಲಿ ಉಪಯೋಗಿ ಸುತ್ತಿದ್ದರೆಂದೂ ಕೆಂಪು, ಹಸಿರು, ಕಪ್ಪು ಮತ್ತು ಹಳದಿ ವರ್ಣದ ದಾಳಗಳನ್ನು ಬಳಸುತ್ತಿದ್ದರೆಂದೂ ಆ ಗ್ರಂಥದಲ್ಲಿದೆ. ಶ್ರೇಷ್ಠ ದಂತದಿಂದ ದಾಳಗಳನ್ನು ನಿರ್ಮಿಸುತ್ತಿದ್ದರೆಂದು ಆಲ್ ಮಸೂದಿ ಬರೆದಿದ್ದಾನೆ.ಭಾರತದಲ್ಲಿರುವು ದಕ್ಕಿಂತ ಹೆಚ್ಚಾಗಿ ಬರ್ಮಾ, ಚೀನಾ, ಮಲಯ, ಜಪಾನ್, ಪರ್ಷಿಯ, ಟಿಬೆಟ್ ಮೊದಲಾದೆಡೆಗಳಲ್ಲಿ ಚದುರಂಗ ಜನಪ್ರಿಯತೆಯನ್ನುಳಿಸಿ ಕೊಂಡಿದೆ. ಈ ಶತಮಾನದ ಆಟಗಾರ ರಲ್ಲಿ ಕ್ಯೂಬಾದ ಕಾಪಾ ಬ್ಲಾಂಕಾ, ಅಮೇರಿಕದ ಬಾಬಿ, ಹಾಲೆಂಡಿನ ಡಾಯುವ. ರಷ್ಯಾದ ಡಾ. ಅಲೇಖಿನಿ, ಭಾರತದ ಸುಲ್ತಾನ್ ಖಾನ್, ಮೂನ್ಯುಯಲ್ ಆರಾನರು ಶ್ರೇಷ್ಠರೆನಿಸಿದ್ದಾರೆ ಎಂದರು.

ಈ ವೇಳೆ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾದ ಡಾ.ಹರಾಳು ಬುಳ್ಳಪ್ಪ, ಡಾ.ತಿಪ್ಪೇಸ್ವಾಮಿ, ಡಾ.ಸತೀಶ.ಕೆ, ವೀರೇಶ್, ಸಹ ಪ್ರಾಧ್ಯಾಪಕರಾದ ನಾಗರಾಜ್‌,  ಕಾಲೇಜು ವ್ಯವಸ್ಥಾಪಕರಾದ  ಸವಿತಾ, ರಾಷ್ಟ್ರೀಯ ಚದುರಂಗ ತೀರ್ಪುಗಾರ ರಫೀಕ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!