ಮಲೇಬೆನ್ನೂರು, ಡಿ.18- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವದ ಅಂಗವಾಗಿ ಅಜ್ಜಯ್ಯನ ಬೆಳ್ಳಿ ರಥೋತ್ಸವವು ಸೋಮವಾರ ಬೆಳಿಗ್ಗೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ನಂದಿಗುಡಿ ಶ್ರೀಗಳು ಹಾಗೂ ಗದ್ದುಗೆ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.
ರಾಜ್ಯದ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ನಂತರ ಬೆಳ್ಳಿ ರಥಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಹಾಜರಿದ್ದ ಭಕ್ತರು `ಅಜ್ಜಯ್ಯ’ ಎಂಬ ಜಯ ಘೋಷದೊಂದಿಗೆ ಬೆಳ್ಳಿ ರಥ ಎಳೆದು ಸಂಭ್ರಮಿಸಿದರು. ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ಸಂಜೆ ಶಿವಭಜನೆ, ಕೀರ್ತನೆ ನಂತರ ಅಜ್ಜಯ್ಯನ ಮೂರ್ತಿಯ ಪಾಲಿಕೋತ್ಸವವು ಹೂವಿನಿಂದ ಅಲಂಕಾರ ಮಾಡಿದ ವಾಹನದಲ್ಲಿ ವೈಭವದೊಂದಿಗೆ ಜರುಗಿತು. ಇದೇ ವೇಳೆ ಭಕ್ತರು ಸಾವಿರಾರು ದೀಪಗಳನ್ನು ಬೆಳಗಿಸಿ, ಅಜ್ಜಯ್ಯ ಕಾರ್ತಿಕೋತ್ಸವವನ್ನೂ ಆಚರಿಸಿದರು.
ಪಟಾಕಿಗಳ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ, ಎಲ್ಲರ ಗಮನ ಸೆಳೆದವು.ಕಾರ್ತಿಕೋತ್ಸವದ ನಂತರ ಭಕ್ತರಿಗೆ ಅಜ್ಜಯ್ಯನ ಮಂಡಕ್ಕಿ ಫಳ್ಹಾರವನ್ನು ವಿತರಿಸಲಾಯಿತು.
ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಉಪಾಧ್ಯಕ್ಷರಾದ ವಾಸ ನದ ನಂದಿಗೌಡ್ರು, ಟ್ರಸ್ಟಿಗಳಾದ ರಾಮನ ಗೌಡ್ರು ಗದಿಗೆಪ್ಪ, ಹೊಸಳ್ಳಿ ಗದಿಗೆಪ್ಪ, ಕೋಟೇರ ಪ್ರಕಾಶ್, ಬಸವನಗೌಡ ಪಾಳ್ಯದ ಗದ್ದಿಗೆಯ್ಯ ಪಾಟೀಲ್, ವೀರನ ಗೌಡ ಹಲಗಪ್ಪನವರ್, ತುಮಕೂರಿನ ಬಸವರಾಜಪ್ಪ, ಸಿದ್ದಲಿಂಗಪ್ಪ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.
ಚಳ್ಳಕೆರೆ ತಾಲ್ಲೂಕು ಕುರುಡಿಹಳ್ಳಿಯ ಶಾರದಮ್ಮ ತಿಮ್ಮಣ್ಣ ಮತ್ತು ತುಮಕೂರಿನ ನಿಸ್ಸಾರ್ ಅಹ್ಮದ್ ಹಾಗೂ ಕುಟುಂಬದವರು ಈ ದಿನದ ದಾಸೋಹಿಗಳಾಗಿದ್ದರು.