ಆಧಾರ ಸಹಿತ ಉತ್ತರಿಸುವ ಜ್ಞಾನವೇ ವಿಜ್ಞಾನ : ಜಿಲ್ಲಾಧಿಕಾರಿ ವೆಂಕಟೇಶ್‌-ಉಳುಪಿನಕಟ್ಟೆಯಲ್ಲಿ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ

ಆಧಾರ ಸಹಿತ ಉತ್ತರಿಸುವ ಜ್ಞಾನವೇ ವಿಜ್ಞಾನ : ಜಿಲ್ಲಾಧಿಕಾರಿ ವೆಂಕಟೇಶ್‌-ಉಳುಪಿನಕಟ್ಟೆಯಲ್ಲಿ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ

ದಾವಣಗೆರೆ, ಡಿ.18- ವಿಜ್ಞಾನ ಎಂಬುದು ನಿತ್ಯಸತ್ಯ. ಪ್ರತಿದಿನದ ಆಗುಹೋಗುಗಳಿಗೆ ಆಧಾರ ಸಮೇತ ಉತ್ತರಿಸುವ ಜ್ಞಾನವೇ ವಿಜ್ಞಾನ. ಆದ್ದರಿಂದಲೇ ಎಲ್ಲರೂ ವೈಜ್ಞಾನಿಕ ಮನೋಧರ್ಮವನ್ನು ಹೊಂದಬೇಕು ಎಂದು  ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅಭಿಪ್ರಾಯ ಪಟ್ಟರು. 

ಆನಗೋಡು ಬಳಿಯ ಉಳುಪಿನಕಟ್ಟೆಯ ಪ್ರಾದೇಶಿಕ ಉಪವಿಜ್ಞಾನ ಕೇಂದ್ರದಲ್ಲಿ ಮೊನ್ನೆ ಏರ್ಪಾಡಾಗಿದ್ದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಾ.ಹೆಚ್. ನರಸಿಂಹಯ್ಯನವರು, ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡಿ. ಇದರರ್ಥ ಮಕ್ಕಳಲ್ಲಿ ತಾವು ಕಾಣುವ ಪ್ರತಿ ಘಟನೆಯಲ್ಲೂ ಅದರ ಸತ್ಯಾಸತ್ಯತೆಯನ್ನು ತಿಳಿಯುವುದೇ ಆಗಿದೆ. ಆದ್ದರಿಂದ ಎಲ್ಲರೂ ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಂಡಾಗ ಸತ್ಯದ ಅರಿವಾಗುತ್ತದೆ. ವೈಜ್ಞಾನಿಕ ಮನೋಭಾವನೆ ಗಟ್ಟಿಗೊಳ್ಳಲು ಪ್ರಶ್ನಿಸುವುದು ಉತ್ತಮ ಸಾಧನ ಎಂದರು. 

ನಮ್ಮ ನಿತ್ಯ ಜೀವನದಲ್ಲಿ ಜರುಗುವ ಘಟನೆಗಳನ್ನು ವೈಜ್ಞಾನಿಕವಾಗಿ ನೋಡಿದಾಗ ಅದ್ಭುತ ಸಂಶೋಧನೆಗಳು ಕಂಡು ಬರುತ್ತವೆ ಎಂಬುದಕ್ಕೆ ನ್ಯೂಟನ್ ಸಾಕ್ಷಿ. ನ್ಯೂಟನ್ನನ ತಲೆಯ ಮೇಲೆ ಸೇಬು ಬಿದ್ದಾಗ ಸಾಮಾನ್ಯರಂತೆ ಅವನು ಹಣ್ಣನ್ನು ನ್ಯೂಟನ್ ತಿನ್ನಲಿಲ್ಲ. ವೈಜ್ಞಾನಿಕವಾಗಿ ಚಿಂತಿಸಿ, ಗುರುತ್ವಾಕರ್ಷಣೆಯ ನಿಯಮಗಳನ್ನು ರೂಪಿಸಿದ ಕಾರಣ ನ್ಯೂಟನ್ನನ ಮೂರು ನಿಯಮಗಳು ರೂಪಿತಗೊಂಡವು.  ಇದು ರಾಕೆಟ್ ಹಾರಿಸಲು ಬುನಾದಿ ಹಾಕಿತು. ಹಾಗಾಗಿಯೇ ವಿಸ್ಮಯಗಳನ್ನು ಬೆರಗುಗಣ್ಣಿನಿಂದ ಮಾತ್ರ ನೋಡದೇ ವೈಜ್ಞಾನಿಕ ತಳಹದಿಯ ಮೇಲೆ ವಿಮರ್ಶಿಸಿ ನೋಡಬೇಕು. ಇದು ಹೊಸ ಸಂಶೋಧನೆಗಳಿಗೆ ನಾಂದಿ ಹಾಡುತ್ತದೆ. 

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಮಕ್ಕಳಿಗೆ ತಾವೇ ಸಂಶೋಧಿಸಿ, ಶಿಕ್ಷಕರ ಮಾರ್ಗದರ್ಶನ ಪಡೆದು ತಯಾರಿಸಿದ ಯೋಜನೆ ಮಂಡನೆಗೆ ಅವಕಾಶ ನೀಡುವುದರಿಂದ ಮಕ್ಕಳಿಗೆ ಒಂದು ಅತ್ಯುಪಯುಕ್ತ ಕಾರ್ಯಕ್ರಮವಾಗಿದೆ. ಇದು ಎಲ್ಲೆಡೆ ವಿಸ್ತರಿಸಬೇಕು. ಹೆಚ್ಚೆಚ್ಚು ಸಂಶೋಧನೆಗಳಾಗಿ ಮೂಲ ವಿಜ್ಞಾನದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವಂತೆ ಮಾಡಬೇಕು ಎಂದರು.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಬಾಲ ಪ್ರತಿಭೆಯಾಗಿದ್ದ ಬಾಪೂಜಿ ಚೈಲ್ಡ್ ಹೆಲ್ತ್ ಇನ್‌ಸ್ಟಿಟ್ಯೂಟ್ ಮತ್ತು ರಿಸರ್ಚ್ ಸೆಂಟರ್‌ನ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞೆ ಡಾ|| ಮಾನಸ ಕೆ.ಬಿ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ತಾವು ಕಾಡಿನಲ್ಲಿ ಸಂಚರಿಸಿ ತಯಾರಿಸಿದ ಯೋಜನೆಯ ವಿವರಗಳನ್ನು ಹಂಚಿಕೊಂಡರು. 

ಅಲ್ಲದೇ, ತಾನಿಂದು ಉನ್ನತ ಸಾಧನೆ ಮಾಡಲು ಕ.ರಾ.ವಿ.ಪ. ಸಂಘಟಿಸಿದ್ದ ವೈಜ್ಞಾನಿಕ ಕಾರ್ಯಕ್ರಮಗಳೇ ಕಾರಣ ಎಂದರು. ನಂತರ ಮಗಳೂ ಸಹ ಕ.ರಾ.ವಿ.ಪ. ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತೇನೆ. ಈಗ ನಿರೀಕ್ಷೆಯ ಕಣ್ಣುಗಳಿಂದ ಕಾಯುತ್ತಿರುವ ವಿದ್ಯಾರ್ಥಿಗಳೆ ಲ್ಲರೂ ಮುಂದೆ ವೇದಿಕೆಯಲ್ಲಿ ಕೂರುವಂತಾಗಬೇಕು. ಹೆಚ್ಚಿನದನ್ನು ಸಾಧಿಸಬೇಕು. ಇದಕ್ಕೆ ಈಗ ನಮಗೆ ಅಂತ ರ್ಜಲದಂತಹ ಅವಕಾಶವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್‌, ಡಾ.ಜಿ.ಬಿ.ರಾಜ್, ಪ್ರೊ.ವೈ.ವೃಷಭೇಂದ್ರಪ್ಪ, ಉಪನಿರ್ದೇಶಕ ಕೊಟ್ರೇಶ್ ಜಿ., ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಮತಿ ವಸಂತಕುಮಾರಿ, ಆರ್.ಬಿ. ಡಾ. ಅನಿಲ್ ಕುಮಾರ್, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಸಿದ್ಧೇಶ್ ಕತ್ತಲಗೆರೆ, ಕರಾವಿಪ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ಎಂ., ಖಜಾಂಚಿ ಅಂಗಡಿ ಸಂಗಮೇಶ್, ಪುಷ್ಪಕುಮಾರ್ ಉಪಸ್ಥಿತರಿದ್ದರು.

error: Content is protected !!