ದಾವಣಗೆರೆ, ಡಿ. 17- ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಶಿವಯೋಗಾಶ್ರಮದ ಆವರಣ ದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಬೆಂಗಳೂರು ರಾಜಧಾನಿಯಾಗಿರುವುದ ರಿಂದ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಕ್ರಮೇಣವಾಗಿ ಕನ್ನಡ ಭಾಷೆ ನಶಿಸಿ ಹೋಗುವ ಆತಂಕ ಮೂಡುತ್ತಿದೆ. ದಾವಣಗೆೆರೆಯನ್ನು ರಾಜಧಾನಿಯನ್ನಾಗಿ ಮಾಡಿದ್ದರೆ ಕನ್ನಡದ ಹೋರಾಟ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ ಎಂದರು.
ದಾವಣಗೆರೆಯಲ್ಲಿಯೇ ಅತಿ ಹೆಚ್ಚು ಕನ್ನಡ ಬಳಕೆ ಮಾಡುತ್ತಿರುವುದನ್ನು ಮನಗಾಣಬೇಕು. ದಾವಣಗೆರೆಯನ್ನು ರಾಜಧಾನಿಯನ್ನಾಗಿ ಮಾಡು ವುದೇ ಸೂಕ್ತ ಎಂದು ಶ್ರೀಗಳು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳಿವೆ. ಭದ್ರಾ ಜಲಾಶಯ ಸಮೀಪದಲ್ಲಿದೆ. ಹೊನ್ನಾಳಿ ಬಳಿ ಜಲಾಶಯ ನಿರ್ಮಾಣ ಮಾಡಿದರೆ ನೀರಾವರಿಯನ್ನು ಒಳಗೊಂಡಂತೆ ರೈತರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರು ಉನ್ನತ ಹುದ್ದೆಗಳಲ್ಲಿದ್ದಾರೆ. ಪೋಷಕರು ಲಕ್ಷಾಂತರ ಹಣ ವ್ಯಯಿಸಿ ಆಂಗ್ಲ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸುವುದು ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಿದರು.
ಜಗಳೂರಿನ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಹೆಚ್.ಜೆ. ಮೈನುದ್ಧೀನ್, ದೇವರಮನಿ ಶಿವರಾಜ್, ಪತ್ರಕರ್ತರಾದ ನಾಗರಾಜ್ ಬಡದಾಳ್ ಮತ್ತಿತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.