ದಾವಣಗೆರೆ, ಡಿ.17- ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕಾಮ್ರೆಡ್ ಪಂಪಾವತಿ ಅವರ ಹೆಸರು ನಾಮಕರಣ ಮಾಡಬೇಕು. ಬಸ್ ನಿಲ್ದಾಣದ ಮುಂದೆ ಪಂಪಾಪತಿ ಅವರ ಪ್ರತಿಮೆ ನಿರ್ಮಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಬಸ್ ನಿಲ್ದಾಣದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಾರ್ಮಿಕ ಮುಖಂಡ ಐರಣಿ ಚಂದ್ರು ಮಾತನಾಡಿ, ಪಂಪಾಪತಿಯವರು ತಮ್ಮ ಜೀವಿತಾವಧಿಯಲ್ಲಿ ಶ್ರಮಿಕರ ಅಳಲನ್ನು ನಿವಾರಣೆ ಮಾಡಿದರು. ತಮ್ಮ ಕುಟುಂಬಕ್ಕೆ ಸೂರು ನಿರ್ಮಿಸಿಕೊಳ್ಳದೆ, ಚಿಕ್ಕ ಜಾಗದಲ್ಲಿ ಜೀವನ ನಡೆಸಿದರು. ಅಂತಹ ಧೀಮಂತ ನಾಯಕರು ಅತಿ ವಿರಳ.
ಕೆಎಸ್ಸಾರ್ಟಿಸಿ ನಿಲ್ದಾಣ ಹಾಗೂ ವಿಭಾಗೀಯ ಕಚೇರಿ ನಿರ್ಮಾಣಕ್ಕೂ ಕಾರಣೀ ಭೂತರಾದ ಅವರ ಜೀವನ, ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್.ಜಿ. ಉಮೇಶ್, ಆವರಗೆರೆ ಚಂದ್ರು, ಆನಂದರಾಜ್ ಹಾಗು ಇತರರು ಇದ್ದರು.