ರಾಣೇಬೆನ್ನೂರು, ಡಿ. 17 – ಈಗ ಸದ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿದ್ದರೂ, ಮುಂದೆ ಬರಬಹುದು ಎನ್ನುವ ಅರಿವಿನೊಂದಿಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಕಾರಣ ಕೊಳವೆ ಬಾವಿಗಳ ದುರಸ್ತಿ, ಹೊಸ ಕೊಳವೆ ಬಾವಿ ಕೊರೆಯುವುದು ಜೊತೆಗೆ ಖಾಸಗಿಯ ಕೊಳವೆಬಾವಿ ಎರವಲು ಪಡೆಯುವ ಬಗ್ಗೆ ಸನ್ನದ್ದರಾಗಿರುವಂತೆ ಶಾಸಕ ಪ್ರಕಾಶ ಕೋಳಿವಾಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ತಾ.ಪಂ. ಸಭಾ ಭವನದಲ್ಲಿ ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಅವರು ನಡೆಸಿದರು.
ಶಾಲೆಗಳಲ್ಲಿನ ಶೌಚಾಲಯ ದುರಸ್ತಿ ಹಾಗೂ ಸ್ವಚ್ಛತೆ, ಬಿಸಿ ಊಟದ ಗುಣಮಟ್ಟ, ಹಾಸ್ಟೆಲ್‌ಗಳ ದೂರುಗಳ ಬಗ್ಗೆ ಪ್ರಸ್ತಾಪಿಸಿ, ನಾನು ಖುದ್ದಾಗಿ ನಿಮಗೆ ತಿಳಿಸದೇ ಭೇಟಿ ಕೊಡುವೆ. ಯಾವುದೇ ನ್ಯೂನತೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವೆ ಎಂದ ಶಾಸಕರು, ಎಸ್ಟಿ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಅವಕಾಶ ಕೊಡದೆ ಹಾಗೂ ಅಲ್ಲಿ ನಡೆದ ಘಟನೆ ಬಗ್ಗೆ ಸರಿಯಾದ ಮಾಹಿತಿ ಕೊಡುವಂತೆ ಸೂಚಿಸಿದರು.
ತಾಲ್ಲೂಕಿನ 26 ಗ್ರಾಮಗಳಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 6 ಪಿಎಚ್ ಸಿ, 87 ಗ್ರಾಮಗಳಿರುವ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 3 ಪಿಎಚ್ ಸಿ ಗಳು 24/7 ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಡಾ : ರಾಜು ಶಿರೂರ ಅವರಿಂದ ಮಾಹಿತಿ ಪಡೆದು, ಆರೋಗ್ಯ ಸಚಿವರಿಂದ ಹೆಚ್ಚಿನ ಸಿಬ್ಭಂದಿ ತಂದು ಆಸ್ಪತ್ರೆಗಳನ್ನ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪ್ರಾರಂಭದಲ್ಲಿಯೇ ಸಭೆಗೆ ಹಾಜರಾದ ಅಧಿಕಾರಿಗಳೆಷ್ಟು, ಬಂದಿರುವ ಅವರ ಸಹಾಯಕರ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳು ಗೈರುಹಾಜರಾದ ಬಗ್ಗೆ ಅವರಿಗೆ ಶೋಕಾಸ್ ನೋಟಿಸು ಕೊಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿ, ಕಳೆದ ತಿಂಗಳು ನಡೆದ ಜನತಾದರ್ಶನದಲ್ಲಿ ಬಂದ ಅರ್ಜಿಗಳ ಬಗ್ಗೆ ಪ್ರತಿ ಇಲಾಖೆಯವರು ಕೈಗೊಂಡ ಕ್ರಮದ ಬಗ್ಗೆ ಪರಿಶೀಲನೆ ನಡೆಸಿ ಪ್ರತಿ ತಿಂಗಳು ನಡೆಯಲಿರುವ ಜನತಾ ದರ್ಶನದ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರೈಸುವಂತೆ ಆದೇಶಿಸಿದರು.
ಎಂಎಲ್ಲೆ ಐಎಎಸ್ ಅಲ್ಲಾ !
ಎಂಎಲ್ಎ, ಐಎಎಸ್, ಐಪಿಎಸ್ ಅಧಿಕಾರಿಯಲ್ಲ ಹಳ್ಳಿಗಳಿಂದ ಬಂದು ಶಾಸಕರಾಗಿರ್ತಾರೆ. ಅವರಿಗೆ ತಿಳಿಯುವ ಭಾಷೆಯಲ್ಲಿ ನೀವು ಪ್ರಗತಿಯ ವರದಿ ಒಪ್ಪಿಸಬೇಕು. ನಿಮ್ಮದೇ ಆದ ತಾಂತ್ರಿಕ ಭಾಷೆಯಲ್ಲಿ ಮಾತನಾಡಿದರೆ ನಮಗೆ ಅರ್ಥ ಆಗಲ್ಲ. ನಿಮ್ಮ ಭಾಷೆಯಲ್ಲಿ ಮಾತನಾಡಿ ನಮ್ಮನ್ನು ಯಾಮಾರಿಸುವ ಪ್ರಯತ್ನ ಮಾಡಬೇಡಿ ಎಂದು ಜಿ.ಪಂ. ಅಧಿಕಾರಿ ಒಪ್ಪಿಸುತ್ತಿದ್ದ ಪ್ರಗತಿಯ ವರದಿಯ ಬಗ್ಗೆ ಶಾಸಕ ಪ್ರಕಾಶ ಕೋಳಿವಾಡ ಸಿಡುಕಿದರು.