ಬಾರ್‌ ಪರವಾನಿಗೆ ರದ್ದು ಮಾಡಲು ಗ್ರಾಮಸ್ಥರ ಆಗ್ರಹ – ಪ್ರತಿಭಟನೆ

ಬಾರ್‌ ಪರವಾನಿಗೆ ರದ್ದು ಮಾಡಲು ಗ್ರಾಮಸ್ಥರ ಆಗ್ರಹ – ಪ್ರತಿಭಟನೆ

ಕಳೆದ ಆರು ವರ್ಷಗಳ ಹಿಂದೆಯೇ ಇಲ್ಲಿ ಬಾರ್ ಬೇಡ ಎಂದು ಹೇಳಿದ್ದರೂ ಗ್ರಾಮಸ್ಥರ ವಿರೋಧದ ನಡುವೆ ಮದ್ಯ ಮಾರಾಟ ಮಳಿಗೆ ಪ್ರಾರಂಭವಾಗಿತ್ತು.  

– ರಮೇಶ್‍ಗೌಡ, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ.

ಹೊನ್ನಾಳಿ, ಆ.21- ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿದ್ದ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಬಾರ್‌ನ ಪರವಾನಿಗೆಯನ್ನು ರದ್ದು ಮಾಡುವಂತೆ  ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಾರ್‍ಗೆ ಬೀಗ ಹಾಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದಲ್ಲಿ ದೇವಸ್ಥಾನ, ಶಾಲೆ ಹಾಗೂ ಕಿರು ಆರೋಗ್ಯ ಸಹಾಯಕಿಯ ವಸತಿಗೃಹ ಇದೆ. ಅಲ್ಲದೆ ಇಲ್ಲಿನ ಹೆಣ್ಣು ಮಕ್ಕಳು ಓಡಾಡುವುದೇ ದುಸ್ತರವಾಗಿರುವುದರಿಂದ ಇಲ್ಲಿ ಬಾರ್ ಬೇಡ ಎಂದು ಹಲವಾರು ಬಾರಿ ಹೇಳಿದ್ದರೂ ಕೇಳದೇ ಬಾರ್‌ ಮುಂದುವರೆಸಿಕೊಂಡು ಬರುತ್ತಿದ್ದರು. 

ಇದಲ್ಲದೆ ರಸ್ತೆ ಅಕ್ಕಪಕ್ಕ ಹಾಗೂ ಜಮೀನಿನಲ್ಲಿ ಕುಳಿತು ಕುಡಿದು ಅಲ್ಲೇ ಬಾಟಲ್‍ಗಳನ್ನು ಬಿಸಾಡಿ ಹೋಗುತ್ತಿದ್ದರು. ಇದರಿಂದ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟವಾಗಿತ್ತು ಎಂದು ಗ್ರಾಮಸ್ಥರು ದೂರಿದರು.

ತರಗನಹಳ್ಳಿ ಗ್ರಾಮದ ಸುತ್ತಮುತ್ತಲಿನಿಂದ ಬಂದು ಇಲ್ಲೇ ಕುಡಿದು ಹೋಗುವಾಗ ಗ್ರಾಮದ ಹೆಣ್ಣುಮಕ್ಕಳು ಮನೆಯಿಂದ ಹೊರಬಾರದ ಸ್ಥಿತಿ ಉಂಟಾಗಿದೆ. ಆದ್ದರಿಂದ ಇಲ್ಲಿ ಬಾರ್ ಬೇಡ ಎಂದು ಪ್ರತಿಭಟನೆ ಮಾಡಿ, ಬೀಗ ಹಾಕಿದ್ದೇವೆ ಎಂದು ಅವರು ವಿವರಿಸಿದರು.

ಸ್ಥಳಕ್ಕೆ ಅಬಕಾರಿ ಸಬ್‍ಇನ್ಸ್‍ಪೆಕ್ಟರ್ : ಗ್ರಾಮದಲ್ಲಿ ಎಮ್‍ಎಸ್‍ಐಎಲ್ ನ ಬಾರ್ ಬೇಡ ಎಂದು ಬೀಗ ಹಾಕಿದ್ದ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಬ್‍ಇನ್‌ಸ್ಪೆಕ್ಟರ್ ಚೇತನ್ ಅವರು ಪ್ರತಿಭಟನೆಕಾರರನ್ನುದ್ದೇಶಿಸಿ, ನೀವು ಬೀಗ ಹಾಕಿಸಲಿಕ್ಕೆ ಬರುವುದಿಲ್ಲ. ನಿಮ್ಮ ಮೇಲೆ ದೂರು ದಾಖಲು ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದಂತೆ, ಗ್ರಾಮಸ್ಥರೆಲ್ಲರೂ ಒಟ್ಟಾಗಿ ಮಾತನಾಡಿ, ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಿಯೇ ಹೋಗಬೇಕು ಎಂದು ಒತ್ತಾಯಿಸಿದಾಗ ಬಂದ ದಾರಿಗೆ ಸುಂಕ ಇಲ್ಲದೆ ವಾಪಸ್ ಹೋದರು. 

ಮಂಗಳವಾರ ಮತ್ತೆ ಅಬಕಾರಿ ಕಚೇರಿಗೆ ಹೋಗಿ ಬಾರ್‌ಗೆ ನೀಡಿರುವ ಪರವಾನಿಗೆ ರದ್ದು ಮಾಡಿ ಎಂದು ಮನವಿ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮದ ಮುಖಂಡರಾದ ಚಂದ್ರಪ್ಪ, ಸಿದ್ದಲಿಂಗಪ್ಪ, ರಮೇಶ್‍ಗೌಡ, ಟಿ.ಶೇಖರಪ್ಪ, ಮಲ್ಲಿಕಾರ್ಜುನ್ ಎಂ.ಪಂಚಪ್ಪ, ಕರಿಬಸಪ್ಪ, ರಾಜು, ಶೇಖರಪ್ಪ, ಟಿ.ಜಿ.ಕೃಷ್ಣ, ಬಸವನಗೌಡ, ಮಲ್ಲಿಕಾರ್ಜುನ್‌, ಪ್ರಭಾಕರ್, ಮಂಜುನಾಥ್, ಶಿವರಾಜ್ ಹಾಗೂ ಗ್ರಾಮಸ್ತರು ಇದ್ದರು.

error: Content is protected !!