ರಾಣೇಬೆನ್ನೂರು :ಇಂದಿನಿಂದಲೇ ಲೋಡ್ ಶೆಡ್ಡಿಂಗ್ ನಿರಂತರ ಹಗಲು ‘4’ ತಾಸು ಸಂಜೆ 6 ರಿಂದ ‘3’ ತಾಸು ವಿದ್ಯುತ್ ವಿತರಣೆ

ರಾಣೇಬೆನ್ನೂರು :ಇಂದಿನಿಂದಲೇ ಲೋಡ್ ಶೆಡ್ಡಿಂಗ್ ನಿರಂತರ  ಹಗಲು ‘4’ ತಾಸು ಸಂಜೆ 6 ರಿಂದ ‘3’ ತಾಸು ವಿದ್ಯುತ್ ವಿತರಣೆ

ಇದು ಹೋರಾಟಕ್ಕೆ ಸಂದ ಜಯ : ಕೆ.ಇ.ಬಿ. ಗ್ರೀಡ್ ಮುತ್ತಿಗೆ ಸಂದರ್ಭದಲ್ಲಿ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹರ್ಷ

ರಾಣೇಬೆನ್ನೂರು, ಆ.21- ಹೋರಾಟದಿಂದ ಏನೆಲ್ಲಾ ಪಡೆಯಲಿಕ್ಕೆ ಸಾಧ್ಯ ಎನ್ನುವುದಕ್ಕೆ ಇಂದಿನ ಕೆ.ಇ.ಬಿ. ಗ್ರೀಡ್ ಮುತ್ತಿಗೆ ಕಾರ್ಯಕ್ರಮವೇ ಸಾಕ್ಷಿ ಎಂದು ರೈತ ಮುಖಂಡ, ಮಾಜಿ ತಾ.ಪಂ. ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು. 

ಅವರು ಇಂದು ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಲೋಡ್ ಶೆಡ್ಡಿಂಗ್ ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಮಹಿಳಾ ಸಂಘಟನೆಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ, ಪಾದಯಾತ್ರೆ ಮೂಲಕ ಸುಣಕಲ್ಲುಬಿದರಿ ಕೆ.ಇ.ಬಿ. ಗ್ರೀಡ್ ಮುತ್ತಿಗೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ನಮ್ಮ ಬೇಡಿಕೆಗೆ ತಕ್ಕಂತೆ ಹೆಸ್ಕಾಂ ಅಧಿಕಾರಿಗಳು ಇಂದಿನಿಂದಲೇ ಹಗಲು ಹೊತ್ತಿನಲ್ಲಿಯೇ ಲೋಡ್ ಶೆಡ್ಡಿಂಗ್ ಇಲ್ಲದೇ ನಿರಂತರ 4 ತಾಸು ವಿದ್ಯುತ್ ಪೂರೈಕೆ ಮತ್ತು ಸಂಜೆ 6 ರಿಂದ 3 ತಾಸು ಯಾವುದೇ ಅಡೆತಡೆಗಳಿಲ್ಲದೆ ವಿದ್ಯುತ್ ಪೂರೈಸುವ ಲಿಖಿತ ಭರವಸೆಯನ್ನು ನೀಡಿರುವುದು ನಮಗೆಲ್ಲ ಸಂತೋಷ ತಂದಿದೆ. ಮೊದಲನೇ ದಿನದ ಈ ಹೋರಾಟದಲ್ಲಿಯೇ ನಾವು ಯಶಸ್ವಿಯಾಗಿದ್ದೇವೆ. ರೈತರ ಭಾವನೆಯನ್ನು ಅರ್ಥ ಮಾಡಿಕೊಂಡು ಆದೇಶ ಮಾಡಿದ ಹೆಸ್ಕಾಂ ಹಿರಿಯ ಅಧಿಕಾರಿಗಳನ್ನು ಅಭಿನಂದಿಸಿದರು. 

ರೈತ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದಕ್ಕೆ ಕೆಲವು ಇಲಾಖೆಗಳ ಇಂತಹ ರೈತ ವಿರೋಧಿ, ಎಡಬಡಂಗಿ ನೀತಿಗಳು ಕೂಡಾ ಕಾರಣವಾಗುತ್ತಿವೆ ಎಂದು ಪಾಟೀಲರು ಎಚ್ಚರಿಸಿದರು.  

ರೈತ ಮುಖಂಡ ಈರಣ್ಣ ಹಲಗೇರಿ, ರೈತ ಮುಖಂಡ, ಎಪಿಎಂಸಿ ಮಾಜಿ ಸದಸ್ಯ ಮಂಜಪ್ಪ ಲಿಂಗದಹಳ್ಳಿ ಮಾತನಾಡಿದರು. 

ಪ್ರತಿಭಟನೆಯಲ್ಲಿ ಆರ್.ಪಿ. ಪಾಟೀಲ ಗ್ರಾಮ ಘಟಕದ ಅಧ್ಯಕ್ಷ ಶಿವಾನಂದ ಲಿಂಗದಹಳ್ಳಿ, ಸುರೇಶ ಅರಳಿ, ಪರ್ವತಗೌಡ ಕುಸಗೂರು, ಶಿವಮೂರ್ತಪ್ಪ ಅರಳಿ, ಗ್ರಾ.ಪಂ. ಅಧ್ಯಕ್ಷ ಮಾದೇಗೌಡ ಜವಾಳಿ, ರೈತ ಮಹಿಳಾ ಮುಖಂಡರಾದ ಶೈಲಕ್ಕ ಕೊಟ್ಟದ, ರತ್ಮವ್ವ ಬಡಿಗೇರ, ಕಾವ್ಯ ಪೂಜಾರ, ಬೇಬಿ ತಳವಾರ, ನಿರ್ಮಲಾ ಜೋಗೇರ, ರೇಖಾ ಹಳ್ಳೂರ, ನೀಲಮ್ಮ ತಾವರಗಿ, ಕವಿತಾ ಕುಸನೂರು, ಕಸ್ತೂರಿ ಬಡಿಗೇರ, ಗಿರೀಶ ಹುಡೇದ, ಹುಸೇನ್‍ಮಿಯಾ ದೊಡ್ಡಮನಿ, ಶಂಕ್ರಗೌಡ ಕುಸಗೂರು, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ, ಬಸವರಾಜ ಯಲ್ಲಕ್ಕನವರ ಮುಂತಾದ ಮುಖಂಡರು ಭಾಗವಹಿಸಿದ್ದರು. 

ಸುಣಕಲ್ಲುಬಿದರಿ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಭಾಗವಹಿಸಿದ್ದರು.

ಹಲಗೇರಿ ಪಿ.ಎಸ್.ಐ. ಬಸವರಾಜ ಬಿರಾದಾರ ಮತ್ತು ಕುಮಾರಪಟ್ಟಣಂ ಸಂತೋಷ ಬಾಗೋಜಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

error: Content is protected !!