ಆ 30 ಸೆಕಂಡಿಗಾಗಿ ಕಾತುರದಿಂದ ಕಾಯುವ ಸಾವಿರಾರು ಭಕ್ತರು
ಮಲೇಬೆನ್ನೂರು, ಆ. 21 – ಕೊಮಾರನಹಳ್ಳಿಯ ಹೆಳವನ ಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕೆರೆ ಅಂಗಳದಲ್ಲಿ ಸೋಮವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಹರಳಹಳ್ಳಿ ಶ್ರೀ ಆಂಜನೇಯ ಸ್ವಾಮಿ ಕಾರಣಿಕೋತ್ಸವ ಜಾತ್ರೆ ಸಂಭ್ರಮದಿಂದ ಜರುಗಿತು. ನಾಗರ ಪಂಚಮಿ ಹಬ್ಬದ ಅಂಗವಾಗಿ ಪ್ರತಿ ವರ್ಷ ನಡೆಯುವ ಈ ಕಾರಣಿಕೋತ್ಸವಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನ ಭಕ್ತರು ಸಾಕ್ಷಿಯಾಗುತ್ತಾರೆ.
ಅಲ್ಲದೇ ಹರಳಹಳ್ಳಿಯ ಆಂಜನೇಯ ಸ್ವಾಮಿ, ಹಾಲಿ ವಾಣದ ವಳೂರು ಕರಿಯಮ್ಮ, ತಿಮ್ಲಾಪುರದ ಆಂಜನೇಯ ಸ್ವಾಮಿ, ಉಡಸಲಮ್ಮ, ಯಕ್ಕನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ, ದಿಬ್ಬದಹಳ್ಳಿ ಶ್ರೀ ಆಂಜನೇಯಸ್ವಾಮಿ, ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಮತ್ತು ಮಲೇಬೆನ್ನೂರಿನ ಶ್ರೀ ಜ್ಯೋತಿ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಏಕನಾಥೇಶ್ವರಿ, ಶ್ರೀ ಕೋಡಿಮಾರೇಶ್ವರಿ, ಶ್ರೀ ದುರ್ಗಾಂಬಿಕಾ ದೇವರುಗಳ ಸಾನ್ನಿಧ್ಯದಲ್ಲಿ ಈ ಕಾರಣಿಕ ನೆರವೇರಿತು.
ಕಾರಣಿಕ ಹೇಳುವುದು ಕೇವಲ 30 ಸೆಕೆಂಡ್ ಮಾತ್ರ. ಆ 30 ಸೆಕೆಂಡಿಗಾಗಿ ಸಾವಿರಾರು ಜನರು ಕಾತುರದಿಂದ ಕಾಯುತ್ತಾರೆ. ಆ 30 ಸೆಕೆಂಡ್ನಲ್ಲಿ ಹೇಳಿದ ಕಾರಣಿಕ ಈ ರೀತಿ ಇದೆ. `ಮುತ್ತಿನ ರಾಶಿಗೆ ಸರ್ಪ ಸುತ್ತಿತಲೇ ಸರ್ಪಕ್ಕೆ ಹದ್ದು ತಾಕೀತಲೆ ಎಚ್ಚರ’
ಈ ಕಾರಣಿಕ ಮಳೆ, ಬೆಳೆ ಮತ್ತು ಜನರ ಸುಖ-ದುಃಖಕ್ಕೆ ಸಂಬಂಧ ಪಟ್ಟಿದ್ದು ಎನ್ನಲಾಗಿದೆ. ಕಾರಣಿಕದ ನಂತರ ಜನರು ಕೆರೆ ಅಂಗಳದಲ್ಲಿ ಕುಳಿತು ಕಾರಾ ಮಂಡಕ್ಕಿ, ಮಿರ್ಚಿ ಸವಿದು ಜಾತ್ರೆ ಮಾಡಿದರು.