ದಾವಣಗೆರೆ, ಆ. 21- ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯದೇವ ವೃತ್ತದಲ್ಲಿ ಜಮಾಯಿಸಿದ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೂಡಲೇ ಸತೀಶ್ ಪೂಜಾರಿ ಅವರನ್ನು ಬಂಧಮುಕ್ತಗೊಳಿಸುವಂತೆ ಒತ್ತಾಯಿಸಿ ಟಯರ್ ಸುಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪೊಲೀಸರು ಟಯರ್‍ಗೆ ನೀರು ಹಾಕಿ ನಂದಿಸಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಉಂಟಾಯಿತು. ಇದಾದ ಬಳಿಕ ಪ್ರತಿಭಟನಾಕಾರರು ಕಾಲ್ನಡಿಗೆ ಮೂಲಕ ನಗರದ ಉಪ ವಿಭಾಗಾಧಿಕಾರಿ ಕಚೇರಿಗೆ ತಲುಪಿ ಎಸಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಆ.14ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆಯೋಜಿಸಲಾಗಿದ್ದ ‘ಅಖಂಡ ಭಾರತ ಸಂಕಲ್ಪ’ ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಾಂತ ಸಹಸಂಯೋಜಕ ಸತೀಶ್ ಪೂಜಾರಿ ಅವರು ದಿಕ್ಸೂಚಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಭಾರತದಲ್ಲಿ 1947ರ ಮಧ್ಯರಾತ್ರಿಯಲ್ಲಿ ನಡೆದ ಭಾರತದ ವಿಭಜನೆ ಮತ್ತು ವಿಭಜನೆಗೆ ಮೊದಲು ಈ ದೇಶದಲ್ಲಿ ಏನೇನು ಘಟನೆಗಳು ಘಟಿಸಿದವು ಅನ್ನುವ ಸತ್ಯ ಸಂಗತಿಗಳನ್ನು ಜನರಿಗೆ ವಿವರಿಸಿದ್ದರಷ್ಟೇ, ಆದರೆ ಸ್ಥಳೀಯ ಪೊಲೀಸರು ಶನಿವಾರ ರಾತ್ರಿ ಸತೀಶ್ ಅವರ ಮನೆಗೆ ನುಗ್ಗಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದೀರಿ ಎಂದು ಅವರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸತೀಶ್ ಪೂಜಾರಿ ಮೇಲೆ ಪ್ರಚೋದನಾಕಾರಿ ಭಾಷಣ ಮಾಡಿರುವ ಬಗ್ಗೆ ಸುಳ್ಳು ಆರೋಪ ಹೊರಿಸಿ, ಸುಮೊಟೋ ಕೇಸನ್ನು ದಾಖಲಿಸಿ, ನೋಟಿಸ್ ಕೂಡ ಜಾರಿ ಮಾಡದೇ ಗಂಭೀರ ಅಪರಾಧವೆಸಗಿದ ಆರೋಪಿಯನ್ನು ಬಂಧಿಸುವಂತೆ ಮಧ್ಯರಾತ್ರಿ ದಾವಣಗೆರೆಯ ಮನೆಗೆ ನುಗ್ಗಿ ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸತೀಶ್ ಅವರನ್ನು ಬಂಧಿಸಲಾಗಿದೆ. ಇವರ ಬಂಧನವನ್ನು ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತವು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಕೆ.ಎಂ. ಸುರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಶಿವರಾಜ್ ಪಾಟೀಲ್, ವೈ. ಮಲ್ಲೇಶ್, ಪವನ್ ರೇವಣಕರ್, ಶಿವನಗೌಡ ಪಾಟೀಲ್, ಸಚಿನ್ ವೆರ್ಣೇಕರ್ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.