ಸುಜ್ಞಾನಿಗಳೇ ನಿಜವಾದ ಸಂಪತ್ತು ಹೊಂದಿದ ಶ್ರೀಮಂತರು

ಸುಜ್ಞಾನಿಗಳೇ ನಿಜವಾದ ಸಂಪತ್ತು ಹೊಂದಿದ ಶ್ರೀಮಂತರು

ಮುಂಬೈ ವಿವಿಯಲ್ಲಿನ ವಚನ ಸಂಸ್ಕೃತಿ ಅಭಿಯಾನದಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಮುಂಬಯಿ ಆ.20- ಯಾರು ನಿಜವಾದ ಸುಜ್ಞಾನಿಗಳಾಗುತ್ತಾರೋ, ಅವರೇ ನಿಜವಾದ ಸಂಪತ್ತನ್ನು ಹೊಂದಿದವರು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು. 

ಅಲ್ಲಮಪ್ರಭುದೇವರು ಒಂದು ಕಡೆ ಹೇಳುತ್ತಾರೆ, ಈ ಭೂಮಿ ಹೇಮ, ಕಾಮಿನಿ ನಿನ್ನವಳಲ್ಲ. ನಿನ್ನೊಡವೆ ಎಂಬುದು ಜ್ಞಾನರತ್ನ. ಅಂತಪ್ಪ ರತ್ನವಗೆಡಗುಡದೆ ಅಲಂಕರಿಸಿದೆನಾದರೆ ಗುಹೇಶ್ವರ ಲಿಂಗದಲ್ಲಿ ನಿನಗಿಂತ ಸಿರಿವಂತರು ಬೇರಿಲ್ಲ ಕಾಣಾ. ಈ ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ನಿಮ್ಮ ಸಂಪತ್ತು ಯಾವುದು ಅಂತ ಕೇಳಿದರೆ ಹೊನ್ನು, ಹೆಣ್ಣು, ಮಣ್ಣು ಅಂತ ಹೇಳ್ತಾರೆ. ಅದೇ ನಿಜವಾದ ಸಂಪತ್ತು ಅಂತ ಭ್ರಮೆಯಲ್ಲಿ ಬದುಕುತ್ತಾ ಇದ್ದಾರೆ. ಆದರೆ ಅಲ್ಲಮಪ್ರಭುದೇವರು ಅವು ನಿನ್ನ ಆಸ್ತಿಯಲ್ಲ. ನಿನ್ನ ಸಂಪತ್ತಲ್ಲ. ನಿನ್ನ ಸಂಪತ್ತು ಜ್ಞಾನರತ್ನ ಅಂತ ಹೇಳುತ್ತಾರೆ. 

 ಇಲ್ಲಿನ  ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಚಿನ್ನರಬಿಂಬ, ಮುಂಬಯಿ, ನಾರಾಯಣಾಮೃತ ಫೌಂಡೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ `ತುಮಾರೆ ಸಿವಾ ಔರ್ ಕೋಯಿ ನಹೀ’ ಅಭಿಯಾನದ  ಸಾನ್ನಿಧ್ಯ ವಹಿಸಿ ಮಾತನಾಡಿದರು. 

ವಿಷಾದ ಸಂಗತಿಯೆಂದರೆ ಜ್ಞಾನವನ್ನು ಸಂಪತ್ತು ಅಂತ ತಿಳಿದುಕೊಂಡಿರುವವರು ತುಂಬಾ ವಿರಳ. ಏನೋ ನಾಲ್ಕು ಅಕ್ಷರಗಳನ್ನು ಕಲಿತು, ಯಾವುದೋ ಪದವಿಯನ್ನು ಪಡೆದು ಅದರ ಮೂಲಕ ದೋಚುವ, ಬಾಚುವ ಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರನ್ನು ಮಹಾಜ್ಞಾನಿಗಳು ಅಂತ ತಿಳಿದುಕೊಂಡಿರುತ್ತಾರೆ. ಅದು ಜ್ಞಾನ ಅಲ್ಲ, ಅಜ್ಞಾನ. ಜ್ಞಾನ ಇದ್ದಾಗ ವ್ಯಕ್ತಿ ಯಾವಾಗಲೂ ಸನ್ಮಾರ್ಗದಲ್ಲೇ ಸಾಗುತ್ತಾನೆ. ದುರ್ಮಾರ್ಗದಲ್ಲಿ ಅಲ್ಲ ಎಂದು ಹೇಳಿದರು.

ಬಹುಶಃ ಶರಣರಷ್ಟು ಮೌಢ್ಯಗಳನ್ನು ವಿರೋಧ ಮಾಡಿದಂಥವರು ಮತ್ತೊಬ್ಬರಿಲ್ಲ. ಆದರೆ ನಾವು ಶರಣರ ಸಾಹಿತ್ಯವನ್ನು ಓದುತ್ತಾ ಮತ್ತೆ ಆ ಮೌಢ್ಯಗಳಿಗೆ ಒಳಗಾಗ್ತಾ ಇದ್ದೇವೆ. ಮನುಷ್ಯನಿಗೆ ಬಂಗಾರದಂತಹ ಬುದ್ಧಿ ಇದೆ. ಆ ಬುದ್ಧಿಯನ್ನು ಸದ್ಭಳಕೆ ಮಾಡಿಕೊಂಡರೆ ಹುಣ್ಣಿಮೆ, ಅಮಾವಾಸ್ಯೆಗಳು ಏನೂ ಮಾಡೋ ದಿಲ್ಲ. ಇಷ್ಟೆಲ್ಲಾ ಹೇಳಿ  ಕೇಳಿ ವಿದ್ಯಾವಂತರೇ ಮೌಢ್ಯಕ್ಕೆ ಒಳಗಾದರೆ ಈ ದೇಶವನ್ನು ಸುಧಾರಣೆ ಮಾಡುವಂಥವರು ಯಾರು ? 

ಇತ್ತೀಚಿಗೆ ಚಂದ್ರಯಾನ – 3 ರಾಕೆಟ್ ಉಡಾವಣೆ ಮಾಡುವಾಗ ದೊಡ್ಡ ದೊಡ್ಡ ವಿಜ್ಞಾನಿಗಳೇ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಉಡಾವಣೆ ಮಾಡಿದ್ದು ತುಂಬಾ ಹಾಸ್ಯಾಸ್ಪದ ಸಂಗತಿ. ಇನ್ನು ನಾವು ಯಾವ ಶತಮಾನದಲ್ಲಿದ್ದೇವೆ ಅಂತ ಯೋಚನೆ ಮಾಡಬೇಕಾಗಿದೆ. ಕೈಯ ಬೆರಳಿನಲ್ಲೇ ಏನೆಲ್ಲ ನೋಡುವ ಅವಕಾಶ ನಿಮ್ಮ ಕೈಯಲ್ಲೇ ಇದೆ. ಆದರೂ ಮೌಢ್ಯಗಳಿಗೆ ಒಳಗಾದರೆ
ಈ ದೇಶವನ್ನು ಸುಧಾರಣೆ ಮಾಡಲಿಕ್ಕೆ ಸಾಧ್ಯ ಯಾವಾಗ? ಎಂದು ಪ್ರಶ್ನಿಸಿದರು. 

ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆಯಲ್ಲಿ ನಾಟಕಕಾರ
ಡಾ. ಮಂಜುನಾಥ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಸುರೇಂದ್ರಕುಮಾರ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್‍ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು. 

error: Content is protected !!