ರಾಣೇಬೆನ್ನೂರು, ಆ. 17- ಇಲ್ಲಿನ ಗಂಗಾ ಸಹಕಾರಿ ಬ್ಯಾಂಕಿನವರು ಕರಾವಳಿ ಸಭಾ ಭವನದಲ್ಲಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ, ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದರು.
ಜನವಾಡದ ಅಲ್ಲಮಪ್ರಭು ಮಠದ ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ರತ್ನಾಕರ ಕುಂದಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಡಾ. ಕಾಂತೇಶ ಅಂಬಿಗೇರ ಮತ್ತು ಹರಿಓಂ ಸುಧಾಕರ ಶೆಟ್ಟಿ ಮಾತನಾಡಿ, ದಿ. ದೇವರಾಜ ಅರಸು ಅವರು ಹಿಂದುಳಿದ ವರ್ಗದ ಜನರು ಉತ್ತಮ ಬದುಕು ಕಟ್ಟಿಕೊಂಡು ಸಮಾಜದ ಮುನ್ನೆಲೆಗೆ ಬರಲು ದಾರಿಮಾಡಿಕೊಟ್ಟರು ಎಂದು ಹೇಳಿ, ಸಂವೇದನಶೀಲ ವ್ಯಕ್ತಿಗಳು ಪ್ರತಿಭಾ ಪುರಸ್ಕಾರ ದಂತಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಕಾರ್ಯಕ್ರಮದ ಫಲಾನುಭವಿಗಳು ತಮ್ಮ ಬದುಕಿನಲ್ಲಿ ಇಂತಹ ಪರಹಿತ ಕಾರ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸುಣಗಾರ, ಹನುಮಂತಪ್ಪ ಕುರ ವತ್ತಿ, ಸುರೇಶ ಜಾಡಮಾಲಿ, ಲಕ್ಷ್ಮಣ ದಾಸರ, ಬಾಬಣ್ಣ ಕಾವಡಿ, ಬಸವರಾಜ ಗುರ್ಕಿ, ವಾಸುದೇವ ಗುಪ್ತಾ, ಶಿವಲಿಂಗಪ್ಪ ಮೇದಾರ ಮತ್ತಿತರರಿದ್ದರು.